2ನೇ ದಿನಕ್ಕೆ ಕಾಲಿಟ್ಟ ಕೇಜ್ರಿವಾಲ್ ಉಪವಾಸ
ನವದೆಹಲಿ: ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ದೆಹಲಿಯಲ್ಲಿ ವಿದ್ಯುತ್ ಮತ್ತು ನೀರಿನ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ನಿನ್ನೆ ಕೇಜ್ರಿವಾಲ್ ದೆಹಲಿಯ ರಾಜ್ಘಾಟ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಕಿಡಿಕಾಡಿರುವ ಕೇಜ್ರಿವಾಲ್, ಬೆಲೆ ಏರಿಕೆಯನ್ನು ಕಡಿತಗೊಳಿಸುವವರೆಗೂ ಉಪವಾಸ ನಿಲ್ಲುಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಬೆಲೆ ಏರಿಕೆ ವಿರುದ್ಧ ದೆಹಲಿಯ 36,743 ನಾಗರಿಕರ ಸಹಿ ಸಂಗ್ರಹಿಸಲಾಗಿದೆ. ತಮ್ಮ ಚಳುವಳಿ ಮುಖಾಂತರ ಬೆಲೆ ಏರಿಕೆಯನ್ನು ಕಡಿತಗೊಳಿಸುವುದಾಗಿ ಜನರಿಗೆ ಭರವಸೆ ನೀಡಿದ್ದೇನೆ. ಈಗಾಗಲೇ ಜನರು ತಮ್ಮ ನಿಲುವಿಗೆ ಸ್ಪಂಧಿಸಿದ್ದು, ವಿದ್ಯುತ್ ಮತ್ತು ನೀರಿನ ಬಿಲ್ಲುಗಳನ್ನು ಪಾವತಿಸದೇ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಾವು ಈ ಬಾರಿ ಸರ್ಕಾರಕ್ಕೆ ಏನೂ ಬೇಡಿಕೆ ಇಟ್ಟಿಲ್ಲ. ಆದರೆ ದೆಹಲಿ ಜನತೆಗೆ ಬೆಲೆ ಏರಿಕೆ ವಿರುದ್ಧ ಹೋರಾಡಿ ಎಂದು ಮನವಿ ಮಾಡುತ್ತಿದ್ದೇನೆ.
ಈಗಾಗಲೇ ಎಎಪಿ ಕಾರ್ಯಕರ್ತರು ನೀರಿನ ಬಿಲ್ಗಳನ್ನು ಪಾವತಿಸಬೇಡಿ ಎಂದು ಮನವಿ ಮಾಡಿ 264 ವಾರ್ಡ್ಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಮನೆ-ಮನೆಗೂ ತೆರಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.