ಲಿಯಾಖತ್ ವಿರುದ್ಧ ತನಿಖೆಗೆ ಎನ್‌ಐಎಗೆ ಆದೇಶ
ಹಿಜ್ಬುಲ್ ಉಗ್ರ ಲಿಯಾಖತ್ ಅಲಿ ಶಾ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎನ್‌ಐಎಗೆ ಆದೇಶಿಸಿದೆ.
ನವದೆಹಲಿ: ಹಿಜ್ಬುಲ್ ಮುಜಾಹಿದೀನ್ ಉಗ್ರ ಲಿಯಾಖತ್ ಅಲಿ ಶಾ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಸೋಮವಾರ ಆದೇಶಿಸಿದೆ.
ಲಿಯಾಖತ್ ಬಂಧನಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ಪೊಲೀಸರ ವಿಭಿನ್ನ ವಾದವನ್ನು ಪರಿಶೀಲಿಸಿದ ಬಳಿಕ ಗೃಹ ಸಚಿವಾಲಯ ಪ್ರಕರಣದ ಬಗ್ಗೆ ಇಂದು ತನಿಖೆಗೆ ಆದೇಶಿಸಿದೆ.
ದೆಹಲಿ ಪೊಲೀಸರ ಪ್ರಕಾರ, ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿನ ಗಲ್ಲಿಗೆ ಪ್ರತಿಕಾರವಾಗಿ ಹೋಳಿ ವೇಳೆ ದೆಹಲಿಯಲ್ಲಿ ನಡೆಸಲುದ್ದೇಶಿಸಿದ್ದ ವಿಧ್ವಂಸಕ ಕೃತ್ಯದಲ್ಲಿ ಲಿಯಾಖತ್ ಶಾಮೀಲಾಗಿದ್ದಾನೆ. ಆದರೆ ಕಾಶ್ಮೀರ ಪೊಲೀಸರು ಹೇಳುವುದೇ ಬೇರೆ. ಲಿಯಾಖತ್ ಶರಣಾಗತನಾಗಿದ್ದು, 15 ವರ್ಷದ ಬಳಿಕ ತನ್ನ ಕುಟುಂಬದೊಂದಿಗೆ ವಾಸಪ್ ಹಿಂತಿರುಗುತ್ತಿದ್ದ ಎಂಬುದು ಅವರ ವಾದ.
ಲಿಯಾಖತ್ ಬಂಧನದಿಂದ ದೆಹಲಿಯಲ್ಲಿ ನಡೆಸಲುದ್ದೇಶಿಸಿದ್ದ ವಿಧ್ವಂಸಕ ಕೃತ್ಯ ವಿಫಲಗೊಂಡಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡಿದ್ದರು. ಆದರೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಲಿಯಾಖತ್ ಶರಣಾಗತ ಉಗ್ರನಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಪುನರ್ವಸತಿ ನೀತಿಯಂತೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಹಿಂತಿರುಗುತ್ತಿದ್ದ. ಈ ವೇಳೆ ಆತನನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದರು.