ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿತೀಶ್, ಮಮತಾ ಓಲೈಕೆಗೆ ಕಾಂಗ್ರೆಸ್ ಯತ್ನ?

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ಡಿಎಂಕೆ ಪಕ್ಷ ಬೆಂಬಲ ವಾಪಸ್ ಪಡೆದುಕೊಂಡ ನಂತರ ಕಾಂಗ್ರೆಸ್ ಹಳೇ ಮೈತ್ರಿ ಪಕ್ಷ...

Rashmi Kasaragodu
Updated On : 26 Mar 2013, 1:04 am

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ಡಿಎಂಕೆ ಪಕ್ಷ ಬೆಂಬಲ ವಾಪಸ್ ಪಡೆದುಕೊಂಡ ನಂತರ ಕಾಂಗ್ರೆಸ್ ಹಳೇ ಮೈತ್ರಿ ಪಕ್ಷಗಳ ಓಲೈಕೆಗೆ ಮುಂದಾಗಿದೆ.

ಯುಪಿಎ ಸರ್ಕಾರದಿಂದ ಡಿಎಂಕೆ ಬೆಂಬಲ ವಾಪಸ್ ಪಡೆದುಕೊಂಡ ನಂತರ ಸಮಾಜವಾದಿ ಪಕ್ಷವೂ ಮೈತ್ರಿ ಮುರಿಯುವ ಭೀತಿ ಹುಟ್ಟಿಸಿದೆ. ಈ ಕಾರಣದಿಂದಾಗಿಯೇ ಕಾಂಗ್ರೆಸ್ ಹೊಸ ಮೈತ್ರಿಗಾಗಿ ಕೈ ಚಾಚಿದೆ.

ಈ ನಿಟ್ಟಿನಲ್ಲಿ ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಬೇಕು ಎಂದು ಹೇಳಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಬೇಡಿಕೆಗೆ ಮಣಿಯಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂಬ ವದಂತಿಯೂ ಇದೆ.

ಮಾತ್ರವಲ್ಲದೆ ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಹಾಗು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೂ ಎರಡನೇ ಅವಕಾಶ ನೀಡುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿದೆ.

ಆದಾಗ್ಯೂ, ಮೈತ್ರಿ ಸರ್ಕಾರದ ಬಗ್ಗೆ ಮುಲಾಯಂ ಸಿಂಗ್ ಅವರ ನಿಲುವನ್ನು ಕಾಂಗ್ರೆಸ್ ತಳ್ಳಿ ಹಾಕಿದರೂ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ತೃತೀಯ ರಂಗದ ಸಾಧ್ಯತೆಯಿರುವುದನ್ನು ಕಾಂಗ್ರೆಸ್ ತಳ್ಳಿ ಹಾಕಿಲ್ಲ.

ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಗಿಟ್ಟಿಸಲು ವಿಫಲವಾದರೆ, ಪ್ರಧಾನಿ ಪಟ್ಟ ತಮಗೇ ಲಭಿಸಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಕನಸು ಕಾಣುತ್ತಿದ್ದಾರೆ.

ಇಂಥಾ ಸಂದರ್ಭದಲ್ಲಿ ತಮ್ಮ ಸರ್ಕಾರವನ್ನು ಸುದೃಢವಾಗಿರಿಸಬೇಕಾದರೆ ನಿತೀಶ್ ಮತ್ತು ಮಮತಾರ ಪಕ್ಷದೊಂದಿಗೆ ಮೈತ್ರಿ ಬೆಳೆಸುವುದೇ ಉತ್ತಮ ಎಂಬುದು ಕಾಂಗ್ರೆಸ್‌ನ ನಿಲುವು.ಆದ್ದರಿಂದಲೇ ನಿತೀಶ್ ಕುಮಾರ್ ಅವರ ಬೇಡಿಕೆಯನ್ನು ಪರಿಗಣಿಸಲು ಹಾಗು ಮಮತಾರ ಪಕ್ಷದೊಂದಿಗೆ ಮತ್ತೊಮ್ಮೆ ಕೈ ಜೋಡಿಸಲು ಕಾಂಗ್ರೆಸ್ ತೆರೆಮರೆಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಬಲ್ಲಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement