ಬಿಎಸ್ಪಿ ಮುಖಂಡನ ಹತ್ಯಾ ಪ್ರಕರಣ; 12 ಮಂದಿಯ ವಿಚಾರಣೆ
ಸ್ಥಳೀಯ ಬಿಎಸ್ಪಿ ಮುಖಂಡ ದೀಪಕ್ ಭಾರಧ್ವಜ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ 12 ಮಂದಿಯನ್ನು ವಿಚಾರಣೆ...
ನವದೆಹಲಿ: ಸ್ಥಳೀಯ ಬಿಎಸ್ಪಿ ಮುಖಂಡ ದೀಪಕ್ ಭಾರಧ್ವಜ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ 12 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಹತ್ಯೆಯಲ್ಲಿ ಹರ್ಯಾಣದ ಸೋನೆಪಟ್ ಪ್ರದೇಶದ ಸುಪಾರಿ ಹಂತಕರ ಕೈವಾಡವಿದೆಯೆ? ಎಂಬುದರ ಬಗ್ಗೆಯೂ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ನಾವು ಭಾರಧ್ವಜ್ ಅವರ ಪತ್ನಿ ಹಾಗು ಮಗನನ್ನು ವಿಚಾರಣೆಗೊಳಪಡಿಸಿದ್ದು, ಆಸ್ತಿ ವಿವಾದವೇನಾದರೂ ಇದೆಯೆ? ಅವರಿಗೆ ಯಾರಾದರೂ ಶತ್ರುಗಳಿದ್ದರೆ? ಎಂಬುದರ ಬಗ್ಗೆ ತನಿಖೆ ನಡೆಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅದೇ ವೇಳೆ ಹತ್ಯೆಗೆ ಸಂಬಂಧಿಸಿದಂತೆ 12 ಮಂದಿಯನ್ನು ಈಗಾಗಲೇ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ನಿತೇಶ್ ಕುಂಜ್ ಫಾರ್ಮ್ಹೌಸ್ನಲ್ಲಿ ಮುಖಂಡನ ಹತ್ಯೆಗೆ ಕಾರಣವಾದ ಶೂಟೌಟ್ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಮಂಗಳವಾರ ಬಿಡುಗಡೆ ಮಾಡಿದ್ದು, ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಸಿಸಿಟಿವಿಯ ದೃಶ್ಯಗಳನ್ನು ನೋಡಿದರೆ ಭಾರಧ್ವಜ್ ಅವರ ಹತ್ಯೆಗೈದ ವ್ಯಕ್ತಿ ಸೋನೆಪಟ್ನವನು ಎಂಬ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಆದಾಗ್ಯೂ, ಭಾರಧ್ವಜ್ ಅವರ ಫಾರ್ಮ್ಹೌಸ್ಗೆ ಬಂದ ಸ್ಕೋಡಾ ಕಾರು ಕೂಡಾ ನಕಲಿ ನಂಬರ್ ಪ್ಲೇಟ್ ಹೊಂದಿದೆ ಎಂಬ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ.