ಕ್ಷಮಾದಾನ ಕೇಳಲ್ಲ: ಸಂಜಯ್ ದತ್
ಸುಪ್ರೀಂ ಕೋರ್ಟ್ ಆದೇಶವನ್ನು ನಾನು ಪಾಲಿಸುತ್ತೇನೆ. ಕೋರ್ಟ್ ಆದೇಶದಂತೆ ನಾನು ಶರಣಾಗುತ್ತೇನೆ ಎಂದು...
ಮುಂಬೈ: ಸುಪ್ರೀಂ ಕೋರ್ಟ್ ಆದೇಶವನ್ನು ನಾನು ಪಾಲಿಸುತ್ತೇನೆ. ಕೋರ್ಟ್ ಆದೇಶದಂತೆ ನಾನು ಶರಣಾಗುತ್ತೇನೆ ಎಂದು ಐದು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಗುರುವಾರ ಹೇಳಿದ್ದಾರೆ.
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಆರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದತ್, ನಾನು ನನ್ನ ದೇಶವನ್ನು, ದೇಶದ ಜನತೆಯನ್ನು ಅಗಾಧವಾಗಿ ಪ್ರೀತಿಸುತ್ತೇನೆ ಮತ್ತು ದೇಶದ ಕಾನೂನನ್ನು ಗೌರವಿಸುತ್ತೇನೆ ಎಂದು ಹೇಳಿದರು. ಈ ವೇಳೆ ತೀವ್ರ ಭಾವುಕರಾದ ಸಂಜಯ್ ದತ್, ಸುದ್ದಿಗೋಷ್ಠಿಯಲ್ಲಿದ್ದ ತಮ್ಮ ಸಹೋದರಿ ಪ್ರಿಯಾ ದತ್ ಅವರನ್ನು ಅಪ್ಪಿಕೊಂಡು ಗಳಗಳನೆ ಅತ್ತರು.
ಇದೇವೇಳೆ ತಾವು ಕ್ಷಮಾದಾನಕ್ಕೆ ಅರ್ಜಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ ದತ್, ಕೋರ್ಟ್ ನೀಡಿದ ಗಡುವಿನೊಳಗೆ ತಾವು ಶರಣಾಗುವುದಾಗಿ ಹೇಳಿದರು. ಅಲ್ಲದೆ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.
ನನ್ನ ಜೀವನದಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಕಳೆದಿದ್ದು, ಶರಣಾಗುವ ಮುನ್ನ ಒಪ್ಪಂದವಾಗಿರುವ ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತೇನೆ. ನಂತರ ಕುಟುಂಬದ ಜತೆ ಕಾಲ ಕಳೆಯುವುದಾಗಿ ಬಾಲಿವುಡ್ ನಟ ತಿಳಿಸಿದರು.