ಮುಲಾಯಂ ಆರೋಪ ನಿರಾಕರಿಸಿದ ಕಾಂಗ್ರೆಸ್
ಕಾಂಗ್ರೆಸ್ ಜಾಣತನದಿಂದ ಮೋಸ ಮಾಡುತ್ತಿದೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ...
ದೆಹಲಿ: ಕಾಂಗ್ರೆಸ್ ಜಾಣತನದಿಂದ ಮೋಸ ಮಾಡುತ್ತಿದೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ರ ಆಪಾದನೆಯನ್ನು ಕಾಂಗ್ರೆಸ್ ತಳ್ಳಿ ಹಾಕಿದೆ. ಅದೇ ವೇಳೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ ಎಂದು ಪ್ರಧಾನಿ ಕಚೇರಿಯ ರಾಜ್ಯ ಸಚಿವ ವಿ. ನಾರಾಯಣ ಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ, ಅವರು ಮೋಸ ಮಾಡಿ ಜಾಣತನ ಮೆರೆಯುತ್ತಾರೆ ಎಂದು ಸಮಾಜವಾದಿ ಪಕ್ಷ ಬುಧವಾರ ಹೇಳಿತ್ತು. ಅದೇ ವೇಳೆ 2014ರ ಚುನಾವಣೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಅಧಿಕಾರಕ್ಕೇರುವುದಿಲ್ಲ ಎಂದು ಮುಲಾಯಂ ಹೇಳಿದ್ದರು.
ಮುಲಾಯಂ ಹೇಳಿಕೆಗೆ ಗುರುವಾರ ಪ್ರತಿಕ್ರಿಯೆ ನೀಡಿದ ನಾರಾಯಣ ಸ್ವಾಮಿ, ಯುಪಿಎ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.
ಬುಧವಾರ ಇತವಾಹ್‌ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಮುಲಾಯಂ ಸಿಂಗ್, ಕಾಂಗ್ರೆಸ್, ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಯಾವುದಾದರೂ ಕೆಲಸಕ್ಕೆ ಕೈ ಹಾಕುತ್ತದೆ ಎಂದು ಹೇಳಿದ್ದರು.
ಈ ಮೊದಲು ರೈತರ ಸಾಲದ ಬಗ್ಗೆ ಭರವಸೆ ನೀಡಿ ಚುನಾವಣೆಯನ್ನು ಗೆದ್ದುಕೊಂಡಿತು. ಕಾಂಗ್ರೆಸ್ ಎಷ್ಟು ಜಾಣತನ ವಹಿಸುತ್ತದೆ ಎಂದರೆ ಅವರು ಮೋಸ ಮಾಡುತ್ತಿದ್ದರೂ ಜನರು ಅವರನ್ನು ನಂಬಿ ಬಿಡುತ್ತಾರೆ ಎಂದು ಮುಲಾಯಂ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ್ದರು.