ದೆಹಲಿ ಗ್ಯಾಂಗ್ರೇಪ್: ಪ್ರತಿದಿನ ವಿಚಾರಣೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ: ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರತಿದಿನ ವಿಚಾರಣೆಯನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ದಿನ ಬಿಟ್ಟು ದಿನ ನಡೆಸುವಂತೆ ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ವಕೀಲರು ಸಲ್ಲಿಸುವಂತಹ ಇಂತಹ ಅರ್ಜಿಗಳಿಂದ ವಿಚಾರಣೆ ವಿಳಂಬವಾಗುತ್ತಿವೆ ಎಂದು ಹೇಳಿದ್ದಾರೆ.
ಡಿಸೆಂಬರ್ 16 ರಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಜನ ದುಷ್ಕರ್ಮಿಗಳು ಚಲಿಸುತ್ತಿದ್ದ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ ಹಲ್ಲೆ ಮಾಡಿದ್ದರು. ಕೆಲವು ದಿನಗಳ ನಂತರ ಯುವತಿ ಸಾವನ್ನಪ್ಪಿದ್ದಳು. ಅತ್ಯಾಚಾರವೆಸಗಿದ್ದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದೆಹಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಬಂಧಿತಾರಾಗಿದ್ದ ಆರೋಪಿಗಳಲ್ಲಿ ಮುಖೇಶ್ ಸಹೋದರ ರಾಮ್ ಸಿಂಗ್ ಕಳೆದ ತಿಂಗಳು ತಿಹಾರ್ ಕೇಂದ್ರ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಇತ್ತೀಚೆಗಷ್ಟೆ ಮುಖೇಶ್ ಎಂಬ ಆರೋಪಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.