ಲಾರಿ ಮುಷ್ಕರ ಮೂಂದೂಡಿಕೆ
ನವದೆಹಲಿ: ಲಾರಿಗಳ ವಿಮೆ ದರ ಏರಿಕೆ, ರಸ್ತೆ ಟೋಲ್‌ಗೇಟ್ ಶುಲ್ಕ ಅವೈಜ್ಞಾನಿಕ ರೀತಿಯಲ್ಲಿ ವಸೂಲು ಮಾಡುವುದನ್ನು ಖಂಡಿಸಿ ಏಪ್ರಿಲ್ 1ರಿಂದ ಕರೆ ನೀಡಲಾಗಿದ್ದ ಅನಿರ್ಧಿಷ್ಟಾವಧಿ ರಾಷ್ಟ್ರವ್ಯಾಪಿ ಸರಕು ಸಾಗಾಣಿಕೆ ಲಾರಿಗಳ ಮುಷ್ಕರವನ್ನು ಮುಂದೂಡಲಾಗಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಅಖಿಲ ಭಾರತ ಸರಕು ಸಾಗಣಿಕೆ ಲಾರಿಗಳ ಮಹಾಸಂಘದ ಅಧ್ಯಕ್ಷ ಬಾಲ್ ಮಲ್ಕಿತ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಲಾರಿಗಳ ಸಂಘದ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ತಿಳಿಸಿದೆ. ಕೂಡಲೇ ಸರ್ಕಾರ ತಾನು ನೀಡಿರುವ ಭರವಸೆಯನ್ನು ಪೂರೈಸಬೇಕು. ಸರ್ಕಾರದಿಂದ ಭರವಸೆ ಪತ್ರ ಬರುವವರೆಗೆ ಮುಷ್ಕರವನ್ನು ತಡೆಹಿಡಿಯುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಲಾರಿ ವಿಮೆಯ ದರವನ್ನು ಏಕಾಏಕಿ ಶೇ.107.47ರಷ್ಟು ಹೆಚ್ಚಿಸುವ ಮೂಲಕ ಸರ್ಕಾರವು ಮಾಲೀಕರ ಬದುಕಿನ ಮೇಲೆ ಬರೆ ಎಳೆದಿದೆ. ಅವೈಜ್ಞಾನಿಕವಾಗಿ ಹೀಗೆ ದಿಢೀರನೇ ಲಾರಿ ವಿಮೆ ತೆರಿಗೆ ಹೆಚ್ಚಿಸಿರುವುದು ಅತ್ಯಂತ ಖಂಡನೀಯ ಸಂಗತಿ ಎಂದು ಸಂಘ ಅಸಮಧಾನ ವ್ಯಕ್ತಪಡಿಸಿತ್ತು.
ಮಾಲೀಕರ ಸುಲಿಗೆ: ಅವ್ಯವಸ್ಥೆಯಿಂದ ಕೂಡಿರುವ ರಸ್ತೆಗಳಲ್ಲಿ, ಬೈಪಾಸ್ ರಸ್ತೆಗಳಲ್ಲಿ ಟೋಲ್‌ಗೇಟ್ ಶುಲ್ಕ ಸಂಗ್ರಹಿಸುವ ಮೂಲಕ ಲಾರಿಗಳೂ ಸೇರಿದಂತೆ ಎಲ್ಲಾ ವಾಹನ ಚಾಲಕರು, ಮಾಲೀಕರನ್ನೂ ಸುಲಿಗೆ ಮಾಡಲಾಗುತ್ತಿದೆ. ಹಾವೇರಿ- ದಾವಣಗೆರೆ- ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ- 4ರಲ್ಲಿ ವ್ಯವಸ್ಥಿತವಾಗಿ ರಸ್ತೆಯನ್ನೇ ನಿರ್ಮಿಸಿಲ್ಲ. ಅಲ್ಲಲ್ಲಿ ಏಕಾಏಕಿ ತಿರುವು ಇದ್ದು, ರಸ್ತೆ ಏರು, ಇಳಿಕೆಯಿಂದ ಕೂಡಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಾಹಿತಿ ಬಹಿರಂಗಪಡಿಸಿಲ್ಲ: ಈವರೆಗೆ ಸಂಗ್ರಹಿಸಿದ ರಸ್ತೆ ಲೋಟ್‌ಗೇಟ್ ಹಣದಿಂದ ಕಾಮಗಾರಿಗೆ ಬಳಸಿದ್ದಕ್ಕಿಂತ ಹೆಚ್ಚು ಹಣ ಕಳೆದ ಕೆಲ ವರ್ಷದಿಂದ ಸಂಗ್ರಹಗೊಂಡಿದೆ. ಆದರೆ, ಟೋಲ್‌ನಿಂದ ಸಂಗ್ರಹವಾದಂತಹ ಹಣ ಎಷ್ಟು, ರಸ್ತೆ ನಿರ್ಮಾಣಕ್ಕೆ ಮಾಡಿದ್ದ ಖರ್ಚು ಎಷ್ಟು, ಇನ್ನೂ ಎಷ್ಟು ವರ್ಷ ಸಂಗ್ರಹಿಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸುತ್ತಿಲ್ಲ. ಟೋಲ್‌ಗೇಟ್ ಮೂಲಕ ನಿತ್ಯ, ನಿರಂತರ ರಸ್ತೆ ಶುಲ್ಕ ವಸೂಲು ಮಾಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ದೂರಿದರು.