ಮುಂದಿನ ಚುನಾವಣೆಯಲ್ಲಿ ಎಸ್ಪಿಗೆ 4 ಸೀಟು; ಬೇಣಿ ಭವಿಷ್ಯ ನುಡಿ
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧ ಕೇಂದ್ರ ಉಕ್ಕು ಸಚಿವ ಬೇಣಿ ಪ್ರಸಾದ್ರ ಟೀಕಾ ಪ್ರಹಾರ...
ಬಲ್ರಾಮ್ಪುರ್: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧ ಕೇಂದ್ರ ಉಕ್ಕು ಸಚಿವ ಬೇಣಿ ಪ್ರಸಾದ್ರ ಟೀಕಾ ಪ್ರಹಾರ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಯಾಕೆಂದರೆ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬೇಣಿ, ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕೇವಲ ನಾಲ್ಕು ಸೀಟುಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿಯುವ ಮೂಲಕ ಮುಲಾಯಂ ವಿರುದ್ಧ ಮತ್ತೊಮ್ಮೆ ಟೀಕೆ ನಡೆಸಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕೇವಲ ನಾಲ್ಕು ಸೀಟುಗಳನ್ನು ಗೆಲ್ಲುತ್ತದೆ. ಮಾತ್ರವಲ್ಲದೆ ಇದು ಸಮಾಜವಾದಿ ಪಕ್ಷದ ಅಂತಿಮ ಯಾತ್ರೆಯಾಗಲಿದೆ ಎಂದು ಬೇಣಿ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬೇಣಿ ಪ್ರಸಾದ್, ಉತ್ತರ ಪ್ರದೇಶದ 80 ಲೋಕಸಭಾ ಸೀಟುಗಳಲ್ಲಿ ಕಾಂಗ್ರೆಸ್ 40 ಸೀಟುಗಳನ್ನು ಗೆಲ್ಲಲಿದೆ. ಅದೇ ವೇಳೆ ಬಿಜೆಪಿಗೆ 10 ಸೀಟಿಗಿಂತ ಹೆಚ್ಚು ಗೆಲ್ಲಲು ನಾವು ಅವಕಾಶ ಕೊಡುವುದಿಲ್ಲ. ಬೆಹೆನ್ಜೀ (ಮಾಯಾವತಿ) 36 ಸೀಟುಗಳನ್ನು ಗೆಲ್ಲುತ್ತಾರೆ. ಆದರೆ ಸಮಾಜವಾದಿ ಪಕ್ಷ ಕೇವಲ 4 ಸೀಟುಗಳನ್ನು ಗೆದ್ದು, ಪಕ್ಷದ ಅಂತಿಮ ಯಾತ್ರೆ ನಡೆಸಲಿದೆ ಎಂದು ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಸೀಟುಗಳನ್ನು ಗೆಲ್ಲಬಹುದು ಎಂಬ ಪ್ರಶ್ನೆ ಬೇಣಿ ಈ ರೀತಿ ಉತ್ತರಿಸಿದ್ದಾರೆ.