ಕ್ಯಾನ್ಸರ್ ಔಷಧ ಪೇಟೆಂಟ್: ನೋವಾರ್ಟಿಸ್ ಅರ್ಜಿ ವಜಾಗೊಳಿಸಿದ ಸುಪ್ರೀಂ
ರಕ್ತ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಗ್ಲಿವೆಕ್ ಔಷಧಕ್ಕೆ ಭಾರತದಲ್ಲಿ ಪೇಟೆಂಟ್ ನೀಡುವಂತೆ ಕೋರಿ ಸ್ವಿಜರ್ಲ್ಯಾಂಡ್ ಫಾರ್ಮ ಕಂಪನಿ...
ನವದೆಹಲಿ: ರಕ್ತ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಗ್ಲಿವೆಕ್ ಔಷಧಕ್ಕೆ ಭಾರತದಲ್ಲಿ ಪೇಟೆಂಟ್ ನೀಡುವಂತೆ ಕೋರಿ ಸ್ವಿಜರ್ಲ್ಯಾಂಡ್ ಫಾರ್ಮ ಕಂಪನಿ ನೋವಾರ್ಟಿಸ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಏಳು ವರ್ಷಗಳ ಕಾನೂನು ಹೋರಾಟದಲ್ಲಿ ಬಹುರಾಷ್ಟ್ರೀಯ ಕಂಪನಿಗೆ ಹಿನ್ನಡೆಯುಂಟಾಗಿದೆ.
ನ್ಯಾಯಾಮೂರ್ತಿ ಅಫ್ತಾಬ್ ಅಲಂ ಮತ್ತು ರಂಜನ ಪ್ರಕಾಶ್ ದೇಸಾಯ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ರಕ್ತ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಔಷಧದಲ್ಲಿ ಹೊಸ ದ್ರವ್ಯ ಬಳಸಲಾಗಿರುವುದರಿಂದ ಇದರ ತಯಾರಿಕೆಯ ಹಕ್ಕು ತಮಗೆ ನೀಡಬೇಕು ಹಾಗೂ ಭಾರತದಲ್ಲಿ ಗ್ಲಿವೆಕ್ ಔಷಧ ಉತ್ಪಾದಿಸುವ ಕಂಪನಿಗಳಿಗೆ ನಿರ್ಬಂಧ ಹಾಕಬೇಕು ಎಂದು ಕೋರಿ ಸ್ವಿಸ್ ನೋವಾರ್ಟಿಸ್ ಕಂಪನಿ ಅರ್ಜಿ ಸಲ್ಲಿಸಿತ್ತು.
ನೈಜ ಸಂಶೋಧನೆ ನಡೆಸುವ ಕಂಪನಿಗಳಿಗೆ ಮಾತ್ರ ಪೇಟೆಂಟ್ ನೀಡಲಾಗುವುದು. ಪುನಾರಾವರ್ತಿತ ಸಂಶೋಧನೆಗೆ ಪೇಟೆಂಟ್ ನೀಡುವುದಿಲ್ಲ. ನೋವಾರ್ಟಿಸ್ ಕಂಪನಿ ತಯಾರಿಸಲ್ಪಟ್ಟ ಔಷಧದಲ್ಲಿ ಹೊಸ ಸಂಶೋಧನೆ ಏನೂ ಇಲ್ಲವಾದ್ದರಿಂದ ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿದೆ ಎಂದು ಭಾರತೀಯ ಕಂಪನಿಗಳ ಪರ ವಕೀಲೆ ಪ್ರತಿಭಾ ಸಿಂಗ್ ಹೇಳಿದ್ದಾರೆ.
ನೋವಾರ್ಟಿಸ್ ಕಂಪನಿ ಗ್ಲಿವೇಕ್ ಔಷಧದಲ್ಲಿ 'ಇಮಾಟೀನಿಬ್ ಮೆಸಿಲೇಟ್' ದ್ರವ್ಯ ಬಳಸಲಾಗಿದೆ ಎಂದು ಹೇಳಿ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಈ ದ್ರವ್ಯ ಸಾಮಾನ್ಯವಾಗಿದ್ದು, ಎಲ್ಲರಿಗೂ ತಿಳಿದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕ್ಯಾನ್ಸರ್ ರೋಗಿಗಳಿಗೆ ನೀಡುವ ಒಂದು ತಿಂಗಳ ಗ್ಲಿವೆಕ್ ಔಷಧದ ಬೆಲೆ 1.2 ಲಕ್ಷವಾಗುತ್ತದೆ. ಆದರೆ ಭಾರತೀಯ ಕಂಪನಿಗಳು ಉತ್ಪಾದಿಸುವ ಈ ಔಷಧದ ಬೆಲೆ ರು. 8,000 ಆಗಿರುತ್ತದೆ.