ಪಾಕ್ ಸಂಸತ್ ಚುನಾವಣಾ ಕಣದಲ್ಲಿ ಬುಡಕಟ್ಟು ಮಹಿಳೆಯರು
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಬುಡಕಟ್ಟು ಮಹಿಳೆಯರು ಮೇ ತಿಂಗಳಲ್ಲಿ ನಡೆಯುವ ಪಾಕ್ ಸಂಸತ್ ಚುನಾವಣೆಗೆ ಸ್ಫರ್ಧಿಸಿದ್ದಾರೆ.
ಬಾಜೌರ್ ಬುಡಕಟ್ಟು ಜನಾಂಗಕ್ಕೆ ಸೇರಿದ 40 ವರ್ಷದ ಬಾದಾಮ್ ಝಾರಿ ಹಾಗೂ ಖೈಬರ್-ಪಖ್ತಂಕ್ವ ಬುಡಕಟ್ಟು ವಲಯದ ಲೋವರ್ ದಿರ್ ಎಂಬ ಜಿಲ್ಲೆಯಿಂದ ನುಸ್ರಾತ್ ಬೇಗಂ ಮೇ 11ರಂದು ನಡೆಯಲಿರುವ ಪಾಕ್ ರಾಷ್ಟ್ರೀಯ ಸಂಸತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಈ ಹಿಂದೆ ಪಾಕ್‌ನಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಮತ ಚಲಾಯಿಸಲು ಬಿಡುತ್ತಿರಲಿಲ್ಲ. ಪುರಷರು ಮಾತ್ರ ಮತ ಚಲಾಯಿಸಬೇಕು ಎಂಬ ಪದ್ಧತಿ ಅನುಸರಿಸುತ್ತಿದ್ದರು ಎಂದು ಬಾಜೌರ್ ಏಜೆನ್ಸಿಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಇಲ್ಲಿಂದ ಇಬ್ಬರು ಮಹಿಳೆಯರು ಚುನಾವಣೆಯಲ್ಲಿ ಸ್ಫರ್ಧಿಸುತ್ತಿದ್ದು, ಸಂಸತ್‌ನಲ್ಲಿ ಬಾಜೌರ್ ವಲಯಕ್ಕೆ ಎರಡು ಸೀಟುಗಳಿವೆ. ಬಾದಾಮ್ ಝಾರಿ ಅವರು ಬುಡಕಟ್ಟು ಜನಾಂಗದ ಮಹಿಳೆಯರ ಕಲ್ಯಾಣಕ್ಕಾಗಿ ದುಡಿಯುವ ಉದ್ದೇಶವಿಟ್ಟುಕೊಂಡು ಕಣಕ್ಕಿಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಾಜೌರ್ ಬುಡಕಟ್ಟು ಪದ್ಧತಿಯಿಂದ ಇಲ್ಲಿನ ಮಹಿಳೆಯರು ಸಾಕಷ್ಟು ನೊಂದಿದ್ದಾರೆ. ಆದ್ದರಿಂದ ಅವರ ನೋವನ್ನು ದೂರಮಾಡುವ ಉದ್ದೇಶವಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಾಗುತ್ತಿದೆ ಎಂದು ಬಾದಾಮ್ ಝಾರಿ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬುಡಕಟ್ಟು ಜನಾಂಗದಲ್ಲಿ ಮಹಿಳೆಯರ ಮೇಲೆ ಹಾಗುತ್ತಿರುವ ದೌರ್ಜನ್ಯವನ್ನು ತಡೆಯುವ ಉದ್ದೇಶ ಹೊಂದಿದ್ದೇನೆ. ಈ ಹಿನ್ನಲೆಯಲ್ಲಿ ಯಾರ ಬೆದರಿಕೆಗೂ ಹೆದರುವುದಿಲ್ಲ. ಇದು ನನ್ನ ಸಂವಿಧಾನದ ಹಕ್ಕು ಎಂದು ಅವರು ಹೇಳಿದ್ದಾರೆ.
ನುಸ್ರಾತ್ ಬೇಗಂ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.