ಸೆಟ್‌ಟಾಪ್ ಬಾಕ್ಸ್ ಗಡುವು ಏ.5ರವರೆಗೆ ವಿಸ್ತರಣೆ
ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ಗಡುವನ್ನು ಏಪ್ರಿಲ್ 5ರವರೆಗೆ ವಿಸ್ತರಿಸಿ ಸೋಮವಾರ ಹೈಕೋರ್ಟ್ ಆದೇಶಿಸಿದೆ...
ಬೆಂಗಳೂರು: ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ಗಡುವನ್ನು ಏಪ್ರಿಲ್ 5ರವರೆಗೆ ವಿಸ್ತರಿಸಿ ಸೋಮವಾರ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಏ.1ರಿಂದ ಅನಲಾಗ್ ಕೇಬಲ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ ಕೋರಿ ಕೇಬಲ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ, ಏಪ್ರಿಲ್ 5ರವರೆಗೆ ಕೇಬಲ್ ಪ್ರಸಾರ ಸ್ಥಗಿತಕ್ಕೆ ತಡೆ ನೀಡಿದೆ.
ಕೇಂದ್ರ ಸರ್ಕಾರದ ಆದೇಶದಂತೆ ತಮ್ಮ ಬಳಿ ಬೇಡಿಕೆಗೆ ತಕ್ಕಂತೆ ಸೆಟ್‌ಟಾಪ್ ಬಾಕ್ಸ್‌ಗಳು ಲಭ್ಯವಿಲ್ಲದಿರುವುದರಿಂದ ಏ.1ರಿಂದ ಸಂಪರ್ಕ ಕಡಿತಗೊಳಿಸಬೇಕು ಎಂಬ ಕೇಂದ್ರದ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಕಾಲವಕಾಶ ಕೋರಿದ ಹಿನ್ನೆಲೆಯಲ್ಲಿ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದೆ.
ಸೆಟ್ ಟಾಪ್ ಬಾಕ್ಸ್‌ನ್ನು ಸೆಟ್ ಮಾಡಿಕೊಳ್ಳಲು ಆದೇಶಿಸಿದ್ದ ಸರ್ಕಾರ, ಸೆಟ್ ಟಾಪ್ ಬಾಕ್ಸ್ ಪಡೆಯುವ ಬಗ್ಗೆ ಇರುವ ಹಲವು ಗೊಂದಲಗಳಿಗೆ ಉತ್ತರ ನೀಡುವ ಮುನ್ನವೇ ಅಂತಿಮ ಗಡುವು ನಿರ್ಧರಿಸಿಬಿಟ್ಟಿತ್ತು.