ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಾಕೋ ವಜಾ, ಪ್ರತಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಸ್ಪೀಕರ್

Vishwanath S
Updated On : 2 May 2013, 5:01 am

ನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣ ಸಂಬಂಧ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ಅಧ್ಯಕ್ಷ ಪಿ.ಸಿ. ಚಾಕೋ ಅವರನ್ನು ವಜಾಗೊಳಿಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸ್ಪೀಕರ್ ಮೀರಾ ಕುಮಾರ್ ಅವರು ಗುರುವಾರ ತಳ್ಳಿಹಾಕಿದ್ದಾರೆ.

ಪಿ.ಸಿ. ಚಾಕೋ ಅವರು 2ಜಿ ಸ್ಪೆಕ್ಟ್ರಂ ಹಗರಣದ ತನಿಖೆಯಲ್ಲಿ ಪಕ್ಷಪಾತ ಮಾಡುತ್ತಿದ್ದು, ಅವರನ್ನು ಜೆಪಿಸಿ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಪಕ್ಷಗಳು ಸ್ಪೀಕರ್‌ಗೆ ಆಗ್ರಹಿಸಿದ್ದವು. ಆದರೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿಯದ ಮೀರಾ ಕುಮಾರ್ ಅವರು ಚಾಕೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಪ್ರತಿಪಕ್ಷ ಬಿಜೆಪಿ ಹಾಗೂ ಯುಪಿಎದಿಂದ ಹೊರ ಬಂದಿರುವ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆಯ 15 ಸದಸ್ಯರು, ಚಾಕೋ ಅವರ ಮೇಲೆ ನಮಗೆ ನಂಬಿಕೆ ಇಲ್ಲ. ಹೀಗಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸ್ಪೀಕರ್‌ಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಸಿರುವ ಮೀರಾ ಅವರು ಚಾಕೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ.

ಹಗರಣದ ಪ್ರಮುಖ ಆರೋಪಿ ಎ. ರಾಜಾ ಅವರ ಸ್ಪಷ್ಟೀಕರಣವನ್ನು ಪಡೆಯಬೇಕು ಎಂದು ಜಂಟಿ ಸಂಸದೀಯ ಸಮಿತಿ ಸದಸ್ಯರು ಹಲವಾರು ಬಾರಿ ಚಾಕೋ ಅವರನ್ನು ಕೇಳಿಕೊಂಡಿದ್ದರೂ ರಾಜಾ ಅವರಿಗೆ ಜೆಪಿಸಿ ಎದುರು ಹೇಳಿಕೆ ನೀಡುವುದಕ್ಕೆ ಅವಕಾಶ ನೀಡಿಲ್ಲ. 30 ಸದಸ್ಯರನ್ನು ಒಳಗೊಂಡಿರುವ ಸಂಸದೀಯ ಸಮಿತಿಯ ಸದಸ್ಯರ ಪೈಕಿ ಅರ್ಧದಷ್ಟು ಸದಸ್ಯರು ಜೆಪಿಸಿ ಅಧ್ಯಕ್ಷ ಚಾಕೋ ಸಿದ್ಧಪಡಿಸಿರುವ ವರದಿಗೆ ವಿರುದ್ಧವಾಗಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮತ್ತು ಹಣಕಾಸು ಸಚಿವರು ಜೆಪಿಸಿ ಎದುರು ಹಾಜರಾಗಬೇಕು ಎಂದು ಹೇಳಿದ್ದರೂ ಚಾಕೋ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಅಲ್ಲದೇ ಜೆಪಿಸಿ ಸದಸ್ಯರಿಗೆ ವರದಿ ವಿತರಿಸುವ ಮೊದಲೇ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಅವರು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೆ ನೈತಿಕ ಹಕ್ಕು ಇಲ್ಲ. ಜೆಪಿಸಿಗೆ ಬೇರೆ ಹಿರಿಯ ಸಂಸದರನ್ನು ನೇಮಕ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement