ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್ ಜೈಲಲ್ಲಿ ಹಲ್ಲೆಗೊಳಗಾಗಿದ್ದ ಸರಬ್ಜಿತ್ ಸಿಂಗ್ ಸಾವು

ಪಾಕಿಸ್ತಾನದ ಜೈಲಿನಲ್ಲಿ ಸಹ ಕೈದಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಭಾರತೀಯ..

Lingaraj Badiger
Updated On : 2 May 2013, 10:39 am

ಇಸ್ಲಾಮಾಬಾದ್/ಲಾಹೋರ್: ಪಾಕಿಸ್ತಾನದ ಜೈಲಿನಲ್ಲಿ ಸಹ ಕೈದಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಅವರು ಗುರುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ಕಳೆದ ವಾರ ಲಾಹೋರ್‌ನ ಕೋಟ್ ಲಕಪತ್ ಜೈಲಿನಲ್ಲಿ ಇಬ್ಬರು ಸಹ ಕೈದಿಗಳು ಸಿಂಗ್ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸರಬ್ಜಿತ್‌ನನ್ನು ಅಲ್ಲಿನ ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ಸೇರುತ್ತಿದ್ದಂತೆ ತೀವ್ರ ರಕ್ತಸ್ರಾವದಿಂದಾಗಿ ಕೋಮಾ ಸ್ಥಿತಿಗೆ ತಲುಪಿದ್ದ ಸರಬ್ಜಿತ್ ಸಿಂಗ್ ಆರೋಗ್ಯ ಸ್ಥಿತಿ ದಿನ ದಿನಕ್ಕೂ ಕ್ಷೀಣಿಸುತ್ತಾ ಬಂತು. ನಿನ್ನೆ ಮತ್ತಷ್ಟು ಗಂಭೀರವಾಗಿದ್ದ ಸರಬ್ಜಿತ್ ಸಿಂಗ್ ಇಂದು ಬೆಳಗ್ಗೆ ಕೊನೆಯುಸಿರೆಳೆದರು.

ಇನ್ನು ಸರಬ್ಜಿತ್ ಸಿಂಗ್ ಸಾವಿನ ಬಗ್ಗೆ ದೇಶದ ಜನತೆ ಮತ್ತು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

ಸರಬ್ಜಿತ್ ಸಿಂಗ್ ಅವರನ್ನು ಪಾಕ್ ಕೊಲೆ ಮಾಡಿದೆ. ಪಾಕಿಸ್ತಾನದಲ್ಲಿ ಯಾವುದೇ ಕಾನೂನು ಮತ್ತು ಮಾನವಿಯತೆ ಇಲ್ಲ. ಅಂತಹ ರಾಷ್ಟ್ರದ ಬಗ್ಗೆ ಕಠಿಣ ನಿಲುವು ತಾಳುವಲ್ಲಿ ನಮ್ಮ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿಯ ಮೀನಾಕ್ಷಿ ಲೇಖಿ ಅವರು ಹೇಳಿದ್ದಾರೆ.

ಸಿಂಗ್ ಸಾವಿಗೆ ಪಾಕ್ ಸರ್ಕಾರವೇ ಹೊಣೆ. ಅವರ ಮೃತ ದೇಹವನ್ನು ಭಾರತಕ್ಕೆ ತರಲಾಗುತ್ತಿದೆ ಎಂದು ಕಾಂಗ್ರೆಸ್‌ನ ರಶಿದ್ ಅಲ್ವಿ ಅವರು ತಿಳಿಸಿದ್ದಾರೆ.

1990ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪದ ಮೇರೆಗೆ ಸರಬ್ಜಿತ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಪ್ರಕರಣದಲ್ಲಿ ನಿರ್ದೋಷಿ ಎಂದು ಹೇಳುತ್ತಲೇ ಬಂದಿರುವ ಸರಬ್ಜಿತ್ ಅವರು ಸರ್ಕಾರದಿಂದ ಕ್ಷಮಾದಾನ ಎದುರು ನೋಡುತ್ತಿದ್ದರು. ಆದರೆ, ಸಂಸತ್ತಿನ ಮೇಲಿನ ದಾಳಿಗೆ ಸಂಚು ರೂಪಿಸಿದ್ದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದ ಬಳಿಕ ಸರಬ್ಜಿತ್ ಅವರಿಗೆ ಭದ್ರತೆ ಒದಗಿಸಲಾಗಿತ್ತು. ಭಾರತೀಯ ಕೈದಿಗಳ ಮೇಲೆ ಪಾಕ್ ಜೈಲಿನಲ್ಲಿ ಹಲ್ಲೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಇನ್ನೊಬ್ಬ ಕೈದಿಯನ್ನು ಜೈಲಿನಲ್ಲಿ ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement