30 ಕೋಟಿ ತೆರಿಗೆ ವಂಚಿಸಿದ ಏಕ್ತಾ ಕಪೂರ್?
ಬಾಲಾಜಿ ಟೆಲಿವಿಷನ್ ಸಂಸ್ಥೆಯ ನಿರ್ದೇಶಕಿ ಏಕ್ತಾ ಕಪೂರ್ ಅವರು, 30 ಕೋಟಿ ರೂ. ಆದಾಯ ತೆರಿಗೆ ಪಾವತಿಸದೇ ವಂಚಿಸಿರುವುದಾಗಿ...
ಮುಂಬೈ: ಬಾಲಾಜಿ ಟೆಲಿವಿಷನ್ ಸಂಸ್ಥೆಯ ನಿರ್ದೇಶಕಿ ಏಕ್ತಾ ಕಪೂರ್ ಅವರು, 30 ಕೋಟಿ ರೂ. ಆದಾಯ ತೆರಿಗೆ ಪಾವತಿಸದೇ ವಂಚಿಸಿರುವುದಾಗಿ ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಾಜಿ ಟೆಲಿವಿಷನ್ ಸಂಸ್ಥೆಯ ಮುಖ್ಯಸ್ಥೆ ಏಕ್ತಾ ಕಪೂರ್ ಮನೆ ಮೇಲೆ ಮಂಗಳವಾರ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ತೆರಿಗೆ ವಂಚಿಸಿದ ಆರೋಪ ಮೇಲೆ ಮಂಗಳವಾರ ಬೆಳಿಗ್ಗೆ 9.30ರ ಸಮಯದಲ್ಲಿ ಸುಮಾರು 100 ಸದಸ್ಯರ ತಂಡವನ್ನೊಳಗೊಂಡ ಆದಾಯ ತೆರಿಗೆ ಅಧಿಕಾರಿಗಳ ತಂಡ ಎಂಟು ಕಡೆ ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಏಕ್ತಾ ಕಪೂರ್ ಅವರ ತಂದೆ ಜಿತೇಂದ್ರರನ್ನು ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅವರು, 'ಏಕ್ತಾ ಕಪೂರ್ ಸಂಸ್ಥೆಯ ಹಣಕಾಸು ಆಡಳಿತ ಮಂಡಳಿ ವಿಚಾರದಲ್ಲಿ ತಲೆ ಹಾಕುತ್ತಿರಲಿಲ್ಲ. ಹೀಗಾಗಿ ತೆರಿಗೆ ವಂಚನೆ ಪ್ರಕರಣದಲ್ಲಿ ಏಕ್ತಾ ಕಪೂರ್ ಅವರ ಪಾತ್ರ ಇಲ್ಲ' ಎಂದು ಹೇಳಿದ್ದಾರೆ.
ಭಾರತದ ಅತಿ ದೊಡ್ಡ ಟೆಲಿವಿಷನ್ ಸಂಸ್ಥೆಯಾಗಿರುವ ಬಾಲಾಜಿ ಟೆಲಿವಿಷನ್ ಸಂಸ್ಥೆಯ ನಿರ್ದೇಶಕಿ ಏಕ್ತಾ ಕಪೂರ್ ಹಾಗೂ ಸಂಸ್ಥೆಯ ನಿರ್ಮಾತೃ ಜಿತೇಂದ್ರ ಮತ್ತು ಅವರ ಸಹೋದರ ತುಷಾರ ಕಪೂರ್ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರು.