ಕಲ್ಲಿದ್ದಲು ಹಗರಣ: ಸಿಬಿಐಯಿಂದ ಸುಪ್ರೀಂಗೆ ಹೊಸ ಅಫಿಡವಿಟ್ ಸಲ್ಲಿಕೆ
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖಾ ಪ್ರಗತಿ ವರದಿ ಸಂಬಂಧ ಸಿಬಿಐ ಸೋಮವಾರ ಸುಪ್ರೀಂ..
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖಾ ಪ್ರಗತಿ ವರದಿ ಸಂಬಂಧ ಸಿಬಿಐ ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೊಸ ಅಫಿಡವಿಟ್ ಸಲ್ಲಿಸಿದೆ.
ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಇಂದು 9 ಪುಟಗಳ ಹೊಸ ಅಫಿಡವಿಟ್ ಸಲ್ಲಿಸಿದ್ದು, ಇದರಲ್ಲಿ ಕೇಂದ್ರ ಕಾನೂನು ಸಚಿವರು ಹಾಗೂ ಪ್ರಧಾನ ಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ತನಿಖಾ ವರದಿಯ ಕರಡು ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸುವ ಮುನ್ನ ಅದರಲ್ಲಿ ಕೆಲವು ತಿದ್ದುಪಡಿ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಆದರೆ ಸಿಬಿಐ ಈ ಮುಂಚೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ, ಕಾನೂನು ಸಚಿವರೊಂದಿಗೆ ಮತ್ತು ಅಟರ್ನಿ ಜನರಲ್ ಜಿಇ.ವಹನ್ವತಿ ಅವರೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಆದರೆ ವರದಿಯಲ್ಲಿ ಯಾವುದೇ ತಿದ್ದುಪಡಿ ಮಾಡಿಲ್ಲ ಎಂದು ಹೇಳಿತ್ತು. ಇದೀಗ ಕಾನೂನು ಸಚಿವ ಅಶ್ವನಿ ಕುಮಾರ್ ಅವರು ವರದಿಯಲ್ಲಿ ಕೆಲವು ತಿದ್ದುಪಡಿ ಮಾಡಿದ್ದು ನಿಜ ಎಂದು ಸಿಬಿಐ ಒಪ್ಪಿಕೊಂಡಿದೆ.
ಇಂದು ಸಿಬಿಐ ಸಲ್ಲಿಸಿರುವ ಅಫಿಡವಿಟ್‌ನ್ನು ಸುಪ್ರೀಂ ಕೋರ್ಟ್ ಮೇ 8ರಂದು ವಿಚಾರಣೆ ನಡೆಸಲಿದ್ದು, ಈ ವೇಳೆ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದೇಯಾದರೆ, ಅಶ್ವನಿ ಕುಮಾರ್ ತಲೆದಂಡವಾಗುವ ಸಾಧ್ಯತೆ ಇದೆ.