ಕೂಡಂಕೂಳಂ ಅಣುಸ್ಥಾವರಕ್ಕೆ ಸುಪ್ರೀಂ ಹಸಿರು ನಿಶಾನೆ
ವಿವಾದಿತ ಕೂಡಂಕುಳಂ ಅಣು ಸ್ಥಾವರ ಕೇಂದ್ರ ಕಾರ್ಯಾರಂಭಕ್ಕೆ ಸುಪ್ರೀಂಕೋರ್ಟ್ ಸೋಮವಾರ ಹಸಿರು ನಿಶಾನೆ ನೀಡಿದೆ...
ನವದೆಹಲಿ: ವಿವಾದಿತ ಕೂಡಂಕುಳಂ ಅಣು ಸ್ಥಾವರ ಕೇಂದ್ರ ಕಾರ್ಯಾರಂಭಕ್ಕೆ ಸುಪ್ರೀಂಕೋರ್ಟ್ ಸೋಮವಾರ ಹಸಿರು ನಿಶಾನೆ ನೀಡಿದೆ.
ತಮಿಳುನಾಡಿನ ಕೂಡಂಕುಳಂ ಅಣು ಸ್ಥಾವರ ಸ್ಥಾಪನೆ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ಮತ್ತು ನ್ಯಾಯಮೂರ್ತಿ ದೀಪಕ್ ಮಿಶ್ರ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ನ ವಿಭಾಗಿಯ ಪೀಠ ಈ ಮಹತ್ವದ ಆದೇಶ ನೀಡಿದೆ.
ಅಣು ಸ್ಥಾವರ ಸ್ಥಾಪನೆ ಕುರಿತಂತೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಸಂಬಂಧ ತಜ್ಞರ ಸಮಿತಿಯನ್ನು ರಚಿಸಿ, ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ತಜ್ಞರ ಸಮಿತಿಯು, ಅಣುಸ್ಥಾವರ ಸ್ಥಾಪನೆಯಿಂದ ಪರಿಸರದ ಹಾಗೂ ಜನರ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿತ್ತು. ಈ ವರದಿಯನ್ನು ಪರಿಶೀಲಿಸಿದ ನಂತರ ಕೋರ್ಟ್ ಹಸಿರು ನಿಶಾನೆ ನೀಡಿದೆ. ಅಲ್ಲದೆ ಒಂದು ದೇಶದ ಅಭಿವೃದ್ದಿ ಸಾಧಿಸಲು ಇಂತಹ ಪರಮಾಣು ಯೋಜನೆಗಳ ಸ್ಥಾಪನೆ ಅವಶ್ಯ ಎಂದು ಅಭಿಪ್ರಾಯ ಪಟ್ಟಿದೆ.
ಈ ಸಂಬಂಧ ಕೇಂದ್ರ ಅಣುಸ್ಥಾವರ ನಿಯಂತ್ರಣ ಮಂಡಳಿಗೆ ಸೂಕ್ತ ಆದೇಶ ನೀಡಿರುವ ನ್ಯಾಯಾಲಯ, ಸುರಕ್ಷತೆ ಸಂಬಂಧ ಯಾವುದೇ ಲೋಪಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗು ನಿಗಾ ವಹಿಸುವಂತೆ ಸೂಚಿಸಿದೆ. ಕೂಡಂಕೂಳಂ ಅಣುಸ್ಥಾವರ ಕಾರ್ಯಾರಂಭಕ್ಕೂ ಮುನ್ನ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿ.
ಅಣುಸ್ಥಾವರದಿಂದ ಹೊರಬರುವ ವಿಕಿರಣಗಳು ಪರಿಸರದ ಹಾಗೂ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದಾಗಿ ತಮಿಳುನಾಡಿನಲ್ಲಿ ಈ ಯೋಜನೆಗೆ ಬಾರಿ ವಿರೋಧ ವ್ಯಕ್ತವಾಗಿತ್ತು.