ಪಿಯು ಫಲಿತಾಂಶ ಪ್ರಕಟ: ಉಡುಪಿ ಪ್ರಥಮ
ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಒಟ್ಟು ಶೇ.59.36ರಷ್ಟು(3,63,057) ವಿದ್ಯಾರ್ಥಿಗಳು ಉತ್ತೀರ್ಣ..
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಒಟ್ಟು ಶೇ.59.36ರಷ್ಟು(3,63,057) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಿಯುಸಿ ಫಲಿತಾಂಶದಲ್ಲೂ ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರು ಶೇ.66.51 ಹಾಗೂ ಬಾಲಕರು ಶೇ.52.72 ರಷ್ಟು ತೇರ್ಗಡೆಯಾಗಿದ್ದಾರೆ.
ಶೈಕ್ಷಣಿಕ ಜಿಲ್ಲೆ ಉಡುಪಿ ಪ್ರಥಮ(ಶೇ.92.72ರಷ್ಟು ಫಲಿತಾಂಶ) ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ದ್ವಿತೀಯ(ಶೇ.91.76) ಸ್ಥಾನ ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇನ್ನು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
ಒಟ್ಟು 3 ಲಕ್ಷ 63 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶದಲ್ಲಿ ಶೇ.2ರಷ್ಟು ಹೆಚ್ಚಳವಾಗಿದೆ.
ಕಲಾ ವಿಭಾಗದಲ್ಲಿ ಶೇ.51.76, ವಾಣಿಜ್ಯ ವಿಭಾಗದಲ್ಲಿ ಶೇ.67.86 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.61.46ರಷ್ಟು ಫಲಿತಾಂಶ ಬಂದಿದೆ. ಇನ್ನು ಉಳಿದಂತೆ ಸರ್ಕಾರಿ ಕಾಲೇಜ್ಗಳಲ್ಲಿ ಶೇ.65.80ರಷ್ಟು, ಅನುದಾನ ರಹಿತ ಕಾಲೇಜ್ಗಳಲ್ಲಿ ಶೇ.72.49 ಹಾಗೂ ಅನುದಾನಿತ ಕಾಲೇಜ್ಗಳಲ್ಲಿ ಶೇ.67.66ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.