ಲಡಾಖ್ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಬದ್ಧ
ನವದೆಹಲಿ: ಭಾರತ-ಚೀನಾ ನಡುವಿನ ಲಡಾಖ್ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸದಿರಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ. ಇದರಿಂದ ಉಭಯ ರಾಷ್ಟ್ರಗಳು ನಡುವಿನ ಬಿಕ್ಕಟ್ಟು ಶಮನವಾದಂತಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಸೋಮವಾರ ತಿಳಿಸಿದೆ.
ಚೀನಾ ಏಪ್ರಿಲ್ 15ರಂದು ಲಡಾಕ್ನಲ್ಲಿ ಗಡಿ ಅತಿಕ್ರಮಣ ಮಾಡಿ, ಆ ಪ್ರದೇಶದಲ್ಲಿ ಸೇನಾ ನೆಲೆ ಸ್ಥಾಪಿಸಿದ್ದರಿಂದ ಉಭಯ ರಾಷ್ಟ್ರಗಳ ಸಂಬಂಧಕ್ಕೆ ಧಕ್ಕೆಯಾಗುವ ಸಾಧ್ಯತೆ ಇತ್ತು. ಈ ಸಂಬಂಧ ಇಂದು ನಡೆದ ಧ್ವಜ ಸಭೆಯಲ್ಲಿ ತನ್ನ ಸೇನೆಯನ್ನು ಹಿಂಪಡೆಯಲು ಚೀನಾ ಒಪ್ಪಿಗೆ ಸೂಚಿಸಿದೆ ಎಂದು ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಲಡಾಕ್ನ ಗಡಿ ದೌಲತಾ ಬೇಗ್ ಓಲ್ಡಿಯಲ್ಲಿ ಚೀನಾ ಮತ್ತು ಭಾರತ ಎರಡೂ ದೇಶಗಳು ತಮ್ಮ ಸೇನೆಯನ್ನು ಏಕಕಾಲದಲ್ಲಿ ಹಿಂದೆ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ.
ಇದಕ್ಕೂ ಮೊದಲು ದೌಲತ್ ಬೇಗ್ ಓಲ್ಡಿಯಲ್ಲಿ ಭಾರತದ ಭೂಭಾಗ ಅತಿಕ್ರಮಣ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿ ಎರಡೂ ದೇಶಗಳ ಸೇನಾ ಕಮಾಂಡರ್ಗಳ ನಡುವಿನ ನಾಲ್ಕನೇ ಫ್ಲ್ಯಾಗ್ ಮೀಟಿಂಗ್ ವಿಫಲವಾಗಿತ್ತು.
ಚೀನಾದ ಟೆಂಟ್ನಿಂದ ಕೇವಲ 300 ಮೀಟರ್ ದೂರದಲ್ಲಿ ಭಾರತ ಸೇನೆ ಟೆಂಟ್ ಪೋಸ್ಟ್ ಸ್ಥಾಪಿಸಿದೆ. ಮೊದಲು ಭಾರತ ತನ್ನ ಟೆಂಟ್ಪೋಸ್ಟ್ ತೆರವುಗೊಳಿಸಲಿ. ಆ ಬಳಿಕ ತನ್ನ ಸೈನಿಕರನ್ನು ಹಿಂದೆ ಕರೆಸುವ ಕುರಿತು ಪರಿಶೀಲಿಸುವುದಾಗಿ ಚೀನಾ ಪಟ್ಟು ಹಿಡಿದಿತ್ತು. ಆದರೆ, ಭಾರತ ಮಾತ್ರ ಎರಡೂ ಸೇನೆಗಳು ಏಕಕಾಲದಲ್ಲಿ ಟೆಂಟ್ಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿತ್ತು.