ಸಚಿವರ ರಾಜಿನಾಮೆಗೆ ಪ್ರತಿಪಕ್ಷಗಳ ಪಟ್ಟು, ಸೋನಿಯಾರಿಂದ ಪ್ರಧಾನಿ ಭೇಟಿ
ರೇಲ್ವೆ ಬಡ್ತಿಗಾಗಿ 90 ಲಕ್ಷ ಲಂಚ ಸ್ವೀಕಾರ ಪ್ರಕರಣ ಸಂಬಂಧ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಹಾಗೂ ಕಲ್ಲಿದ್ದಲು ಹಗರಣದ...
ನವದೆಹಲಿ: ರೇಲ್ವೆ ಬಡ್ತಿಗಾಗಿ 90 ಲಕ್ಷ ಲಂಚ ಸ್ವೀಕಾರ ಪ್ರಕರಣ ಸಂಬಂಧ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಹಾಗೂ ಕಲ್ಲಿದ್ದಲು ಹಗರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪ ಎದುರಿಸುತ್ತಿರುವ ಕಾನೂನು ಸಚಿವ ಅಶ್ವನಿ ಕುಮಾರ್ ಅವರ ರಾಜಿನಾಮೆಗೆ ಪಟ್ಟು ಹಿಡಿದಿರುವ ಪ್ರತಿಪಕ್ಷ ಬಿಜೆಪಿ, ಈ ಸಂಬಂಧ ಇಂದು ಸಂಸತ್ನ ಎರಡು ಸದನಗಳಲ್ಲಿ ಇಬ್ಬರು ಸಚಿವರ ತಲೆದಂಡಕ್ಕೆ ಆಗ್ರಹಿಸಿ ಕೋಲಾಹಾಲವೆಬ್ಬಿಸಿತು.
ರಾಜಿನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಒತ್ತಡ ಹೆಚ್ಚುತ್ತಿದ್ದಂತೆ, ಸಂಸತ್ ಭವನದಲೇ ತುರ್ತು ಕಾಂಗ್ರೆಸ್ ಕೋರ್ ಕಮಿಟಿ ಸಭೆ ನಡೆಸಿತು. ಈ ವೇಳೆ ಇಬ್ಬರು ಸಚಿವರ ರಾಜಿನಾಮೆಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ರ ಜೊತೆ ಸೋನಿಯಾಗಾಂಧಿ ಸುದೀರ್ಘ ಚರ್ಚೆ ನಡೆಸಿದರು. ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟೋನಿ ಹಾಗು ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಹಾಜರಿದ್ದರು.
ಬನ್ಸಲ್ ಹಾಗೂ ಅಶ್ವನಿ ಕುಮಾರ್ ಅವಗ ರಾಜಿನಾಮೆಗೆ ಆಗ್ರಹಿಸಿ ಲೋಕಸಭೆಯಲ್ಲಿ ಗದ್ದಲವೆಬ್ಬಿಸಿದ ಹಿನ್ನೆಲೆಯಲ್ಲಿ, ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮತ್ತೇ 1 ಗಂಟೆಯವರೆಗೆ ಮುಂದೂಡಲಾಯಿತು. ಇದೇ ವೇಳೆ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ರಾಜಿನಾಮೆಗೆ ಪಟ್ಟು ಮುಂದುವರೆಸಿದ್ದರಿಂದ ಸದನವನ್ನು 2 ಗಂಟೆಯವರೆಗೆ ಮುಂದೂಡಲಾಗಿತ್ತು.