ಸನಾವುಲ್ಲಾ ಹಖ್ ಕುಟುಂಬ ಭಾರತಕ್ಕೆ
ನವದೆಹಲಿ: ಜಮ್ಮು ಜೈಲಿನಲ್ಲಿ 4 ದಿನಗಳ ಹಿಂದೆ ಸಹ ಕೈದಿಗಳಿಂದ ತೀವ್ರ ಹಲ್ಲೆಗೊಳಗಾಗಿ ಕೋಮಾಗೆ ಜಾರಿರುವ ಪಾಕಿಸ್ತಾನದ ಕೈದಿ ಸನಾವುಲ್ಲಾ ಹಖ್ ಅವರನ್ನು ನೋಡಲು ಅವರ ಸಹೋದರ ಸೇರಿದಂತೆ ಕುಟುಂಬಸ್ಥರು ಮಂಗಳವಾರ ಭಾರತಕ್ಕೆ ಆಗಮಿಸಿದ್ದಾರೆ.
ಸನಾವುಲ್ಲಾ ಹಖ್ ಅವರನ್ನು ನೋಡಲು ಭಾರತ ಸರ್ಕಾರ ಅವರ ಕುಟುಂಬವರ್ಗಕ್ಕೆ ವೀಸಾ ನೀಡಿದ್ದರಿಂದ ಅವರು ಇಂದು ಭಾರತಕ್ಕೆ ಬಂದಿದ್ದಾರೆ. ಸದ್ಯ ಚತ್ತೀಸ್ಗಡದ ಆಸ್ಪತ್ರೆಯಲ್ಲಿ ಸನಾವುಲ್ಲಾಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸನಾವುಲ್ಲಾ ಹಕ್ ಸಹೋದರ, ಸಹ ಕೈದಿಗಳಿಂದ ತೀವ್ರ ಹಲ್ಲೆಗೊಳಗಾಗಿ ಕೋಮಾಗೆ ಜಾರಿರುವ ಸನಾವುಲ್ಲಾ ಹಖ್ನನ್ನು ಚಿಕಿತ್ಸೆಗಾಗಿ ಸ್ವದೇಶಕ್ಕೆ ಕಳುಹಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಜತಾಂತ್ರಿಕ ಅಧಿಕಾರಿಗಳಿಗೆ ಸನಾವುಲ್ಲಾ ಹಕ್ನನ್ನು ಕಾಣಲು ಅವಕಾಶ ಕಲ್ಪಿಸಿರುವುದರಿಂದ ಅಧಿಕಾರಿ ಸಲ್ಮಾನ್ ಬಷಿರ್ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸರಬ್ಜಿತ್ ಸಿಂಗ್ ಹತ್ಯೆಗೆ ಪ್ರತಿಕಾರವಾಗಿ ಜಮ್ಮು ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಕೈದಿ ಸನಾವುಲ್ಲಾ ಹಖ್ ಸದ್ಯ ಕೋಮಾ ಸ್ಥಿತಿಗೆ ಜಾರಿದ್ದು, ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿಲ್ಲದ ಕಾರಣ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಸನಾವುಲ್ಲಾ ಹಕ್ ಸ್ಥಿತಿ ಗಂಭೀರವಾಗಿದೆ.