ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್ ಕೈದಿ ಸನಾವುಲ್ಲಾ ಸಾವು, ತನಿಖೆಗೆ ಪಾಕ್ ಆಗ್ರಹ

ಜಮ್ಮು-ಕಾಶ್ಮೀರದ ಕಾರಾಗೃಹದಲ್ಲಿ ಸಹ ಕೈದಿಗಳಿಂದ ತೀವ್ರ ಹಲ್ಲೆಗಿಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನದ ಕೈದಿ..

Lingaraj Badiger
Updated On : 9 May 2013, 1:16 am

ಚಂಡೀಗಡ: ಜಮ್ಮು-ಕಾಶ್ಮೀರದ ಕಾರಾಗೃಹದಲ್ಲಿ ಸಹ ಕೈದಿಗಳಿಂದ ತೀವ್ರ ಹಲ್ಲೆಗಿಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನದ ಕೈದಿ ಸನಾವುಲ್ಲಾ ರಾಂಜೇಯ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಜಮ್ಮುವಿನ ಕೋಟ್ ಭಲ್ವಾಲ್ ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ 52 ವರ್ಷದ ಸನಾವುಲ್ಲಾನನ್ನು ಇಲ್ಲಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ(ಪಿಜಿಐಎಂಇಆರ್)ಕ್ಕೆ ದಾಖಲಿಸಲಾಗಿತ್ತು. ನಿನ್ನೆಯಷ್ಟೆ ಸನಾವುಲ್ಲಾ ಪರಿಸ್ಥಿತಿ ಮತ್ತಷ್ಟು ವಿಷಮಿಸಿದ್ದು, ಆತನ ಮೂತ್ರಪಿಂಡ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಮೂತ್ರಪಿಂಡ ವೈಫಲ್ಯ ಸೇರಿದಂತೆ ದೇಹದ ವಿವಿಧ ಅಂಗ ವೈಫಲ್ಯದಿಂದ ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಸನಾವುಲ್ಲಾ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಪಾಕ್ ಕೈದಿ ಸನಾವುಲ್ಲಾ ಮೇಲೆ ಮತ್ತೊಬ್ಬ ಕೈದಿ ವಿನೋದ್ ಕುಮಾರ್ ತೀವ್ರ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾದ ಸನಾವುಲ್ಲಾನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾದ ಕಾರಣ ಚಂಡೀಗಡ ಪಿಜಿಐ ಆಸ್ಪತ್ರೆಗೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿತ್ತು.

ಸನಾವುಲ್ಲಾ ಸಾವಿನ ನಂತರ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಮಾಧ್ಯಮಕ್ಕೆ ಮಾತನಾಡಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸನಾವುಲ್ಲಾನ ಮೃತ ದೇಹವನ್ನು ಪಾಕಿಸ್ತಾನಕ್ಕೆ ಒಪ್ಪಿಸಲಾಗುವುದು. ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಕ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ಇನ್ನು ಸನಾವುಲ್ಲಾ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ತಾನ, ತನಿಖೆಗೆ ಒತ್ತಾಯಿಸಿದೆ.

1990ರಲ್ಲಿ ಜಮ್ಮುವಿನ ಸರ್ಕಾರಿ ಕಟ್ಟಡಗಳು ಹಾಗೂ ವಿದ್ಯುತ್ ಟವರ್‌ಗಳಲ್ಲಿ ಬಾಂಬ್ ಸ್ಫೋಟಿಸಿದ ಆರೋಪದಲ್ಲಿ ಟಾಡಾ ಕೋರ್ಟ್ ಸನಾವುಲ್ಲಾ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪಾಕಿಸ್ತಾನದ ಸಿಯಾಲ್‌ಕೋಟ್ ನಿವಾಸಿಯಾಗಿರುವ  ಸನಾವುಲ್ಲಾ  ಕಳೆದ 17 ವರ್ಷಗಳಿಂದ ಕೋಟ್ ಭಲ್ವಾಲ್ ಜೈಲಿನಲ್ಲಿದ್ದ. ಶುಕ್ರವಾರ ಬೆಳಗ್ಗೆ ಕೈದಿಗಳೆಲ್ಲ ತಮ್ಮ ಸೆಲ್‌ಗಳಿಂದ ಹೊರಬಂದಿದ್ದರು. ಈ ವೇಳೆ ಮತ್ತೊಬ್ಬ ಕೈದಿ ವಿನೋದ್ ಕುಮಾರ್ ಹಾಗೂ ಸನಾವುಲ್ಲಾ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೇರಿ ವಿನೋದ್ ಕುಮಾರ್ ಅಲ್ಲೇ ಇದ್ದ ಕೊಡಲಿಯಿಂದ ಸನಾವುಲ್ಲಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ . ಸನಾವುಲ್ಲಾ ತಲೆ ಹಾಗೂ ಎದೆಯ ಎಡಭಾಗಕ್ಕೆ ತೀವ್ರ ಪೆಟ್ಟಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement