ನಾನು ಯಾವುದೇ ತಪ್ಪು ಮಾಡಿಲ್ಲ: ಅಶ್ವನಿ ಕುಮಾರ್
ಕಲ್ಲಿದ್ದಲು ಹಗರಣದ ತನಿಖೆ ನಡೆಸಿದ ಸಿಬಿಐನ ತನಿಖಾ ವರದಿ ತಿದ್ದಿದ ಆರೋಪದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೇಂದ್ರ ಕಾನೂನು..
ನವದೆಹಲಿ: ಕಲ್ಲಿದ್ದಲು ಹಗರಣದ ತನಿಖೆ ನಡೆಸಿದ ಸಿಬಿಐನ ತನಿಖಾ ವರದಿ ತಿದ್ದಿದ ಆರೋಪದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೇಂದ್ರ ಕಾನೂನು ಸಚಿವ ಸ್ಥಾನಕ್ಕೆ ರಾಜಿನಾಮ ನೀಡಿದ್ದ ಅಶ್ವನಿ ಕುಮಾರ್ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಶನಿವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಶ್ವನಿ ಕುಮಾರ್, ತಾವು ಯಾವುದೇ ತಪ್ಪು ಮಾಡಿಲ್ಲ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಸೂಚನೆಯಂತೆ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ತಿಳಿಸಿದರು.
ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಮತ್ತು ಅನವಶ್ಯಕ ವಿವಾದಗಳಿಗೆ ತೆರೆ ಎಳೆಯುವ ಉದ್ದೇಶದಿಂದ ತಾವು ರಾಜಿನಾಮೆ ನೀಡಿರುವುದಾಗಿ ಅಶ್ವನಿ ಕುಮಾರ್ ತಮ್ಮನ್ನು ತಾವು ಸಮರ್ಥಿಸಿಕೊಂಡರು. ಅಲ್ಲದೆ ಕಲ್ಲಿದ್ದಲು ಹಗರಣದ ತನಿಖಾ ವರದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನನ್ನ ವಿರುದ್ದ ಯಾವುದೇ ಹೇಳಿಕೆ ನೀಡಿಲ್ಲ ಎಂದರು.
ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಶೀಘ್ರದಲ್ಲೇ ಸತ್ಯ ಹೊರ ಬರಲಿದೆ ಎಂದು ಅಶ್ವನಿ ಕುಮಾರ್ ಹೇಳಿದರು.
ಅಶ್ವನಿ ಕುಮಾರ್ ಹಾಗೂ ರೇಲ್ವೆ ಸಚಿವ ಪವನಕುಮಾರ್ ಬನ್ಸಲ್ ಅವರ ರಾಜಿನಾಮೆ ಪಡೆಯಬೇಕು ಎಂದು ಪ್ರತಿಪಕ್ಷಗಳು ಮತ್ತು ಕಾಂಗ್ರೆಸ್‌ನ ಒಂದು ವರ್ಗದಿಂದ ತೀವ್ರ ಒತ್ತಡ ಎದುರಿಸುತ್ತಿದ್ದ ಪ್ರಧಾನಿ ಸಿಂಗ್ ಅವರು ನಿನ್ನೆ ಒತ್ತಾಯ ಪೂರ್ವಕವಾಗಿ ಇಬ್ಬರಿಂದಲೂ ರಾಜಿನಾಮೆ ಪಡೆದುಕೊಂಡಿದ್ದರು.