ಪ್ರಧಾನಿ ರಾಜಿನಾಮೆಗೆ ಬಿಜೆಪಿ ಆಗ್ರಹ
ನವದೆಹಲಿ: ಕೇಂದ್ರ ಸಚಿವರಾದ ಪಿ.ಕೆ. ಬನ್ಸಲ್ ಹಾಗೂ ಅಶ್ವನಿ ಕುಮಾರ್ ತಮ್ಮ ಸಚಿವ ಸ್ಥಾನಕ್ಕೆ ಶುಕ್ರವಾರ ರಾಜಿನಾಮೆ ನೀಡಿದ ಬೆನ್ನಲ್ಲೇ, ಈಗ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಹ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಆಗ್ರಹಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಹೊಸ ಸರ್ಕಾರದ ಅವಶ್ಯಕತೆ ಇದೆ. ಹೊಸ ಸರ್ಕಾರದ ವಿನಾ ರಾಷ್ಟ್ರದ ಅಭಿವೃದ್ದಿ ಸಾಧ್ಯವಿಲ್ಲ ಎಂದರು. ಭ್ರಷ್ಟ ಸರ್ಕಾರದ ವಿರುದ್ಧ ಜನರು ತಿರುಗಿ ಬೀಳುವ ಮುನ್ನವೇ, ಪ್ರಧಾನಿ ಎಚ್ಚೆತ್ತುಕೊಂಡು ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕು ಎಂದರು.
ಈ ಭ್ರಷ್ಟ ಯುಪಿಎ ಸರ್ಕಾರ ತನ್ನ ಅವಧಿಯೂದ್ದಕ್ಕೂ ದೊಡ್ಡ ಮಟ್ಟದ ಹಗರಣಗಳಲ್ಲಿ ಸಿಲುಕಿಕೊಂಡು ಪದೇ ಪದೇ ಪೇಚಿಗೆ ಸಿಲುಕುತ್ತಿದ್ದರು ಸರ್ಕಾರವನ್ನು ವಿಸರ್ಜಿಸದೆ ಮೊಂಡುತನ ಪ್ರದರ್ಶಿಸುತ್ತಿದೆ ಎಂದರು. ಸಚಿವರಿಬ್ಬರು ರಾಜಿನಾಮೆ ನೀಡಿರುವುದನ್ನು ಪ್ರಧಾನಿಯವರು ಸಮರ್ಥಿಸಿಕೊಳ್ಳದೇ, ತಮ್ಮ ಸರ್ಕಾರದ ಭ್ರಷ್ಟಚಾರದ ಪ್ರಸ್ತುತತೆಯನ್ನು ಆತ್ಮವಲೋಕನ ಮಾಡಿಕೊಂಡು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದು ಉತ್ತಮ ಎಂದು ಸಲಹೆ ನೀಡಿದರು.
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಪ್ರಧಾನಿ ಸಿಂಗ್ ಅವರು ನಿನ್ನೆ ಬಡ್ತಿ ಸಂಬಂಧ ಲಂಚ ಪಡೆದ ಆರೋಪದ ಮೇಲೆ ಕೇಂದ್ರ ರೇಲ್ವೆ ಸಚಿವ ಪಿ.ಕೆ. ಬನ್ಸಲ್ ಹಾಗೂ ಕಲ್ಲಿದ್ದಲು ಹಗರಣದ ತನಿಖೆ ನಡೆಸಿದ ಸಿಬಿಐನ ತನಿಖಾ ವರದಿ ತಿದ್ದುಪಡಿ ಮಾಡಿರುವ ಆರೋಪದಡಿ ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಅವರಿಂದ ರಾಜಿನಾಮೆ ಪಡೆದುಕೊಂಡಿದ್ದರು. ಆದರೆ ಇದೀಗ ಪ್ರತಿಪಕ್ಷಗಳು ಅವರ ರಾಜಿನಾಮೆಗೆ ಆಗ್ರಹಿಸುತ್ತಿವೆ.