ಹಿಂಡಲಗಾ ಜೈಲಿನಲ್ಲಿ ಪಾಕ್ ಕೈದಿ ಅಸ್ವಸ್ಥ
ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಳೆದ 5 ದಿನಗಳಿಂದ ಜೈಲು ಅಧಿಕಾರಿಗಳ ವಿರುದ್ದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಕೈದಿ ಮಹಮದ್ ಫಲಾಬ್ ತೀವ್ರ ಅಸ್ವಸ್ಥನಾಗಿದ್ದು, ಆತನನ್ನು ಜೈಲು ಸಿಬ್ಬಂದಿ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜೈಲಿನಲ್ಲಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಮದ್ ಫಲಾಬ್ ಕೋಣೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ತಕ್ಷಣ ಮೊಬೈಲ್ ಅನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದರು. ಇದರಿಂದ ಕುಪಿತಗೊಂಡ ಪಾಕ್ ಕೈದಿ 5 ದಿನಗಳಿಂದ ಅಧಿಕಾರಿಗಳ ವಿರುದ್ದ ಉಪವಾಸ ನಡೆಸುತ್ತಿದ್ದ.
2006ರಲ್ಲಿ ರಾಜ್ಯದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪದ ಮೇಲೆ ಪೊಲೀಸರು ಈ ಶಂಕಿತ ಉಗ್ರನನ್ನು ಮೈಸೂರಿನಲ್ಲಿ ಬಂಧಸಿ, ಬೆಳಗಾವಿಯ ಹಿಂಡಾಗಾಲ ಜೈಲಿಗೆ ಕಳಿಸಿದ್ದರು.
ಮೊಬೈಲ್ ಪತ್ತೆಯಾದ ನಂತರ ಜೈಲಿನ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗಿತ್ತು. ಅಲ್ಲದೆ ಈ ಸಂಬಂಧ ನಾಲ್ವರು ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿತ್ತು.