ಆಹಾರ ಭದ್ರತಾ ಮಸೂದೆಗೆ ಶೀಘ್ರ ಅಂಗೀಕಾರ: ಕೆ.ವಿ. ಥಾಮಸ್
ನವದೆಹಲಿ: ಆಹಾರ ಭದ್ರತಾ ಮಸೂದೆಗೆ 10-15 ದಿನಗಳ ಒಳಗಾಗಿ ಸಂಸತ್ನಲ್ಲಿ ಅಂಗೀಕಾರ ಸಿಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಆಹಾರ ಸಚಿವ ಕೆ.ವಿ. ಥಾಮಸ್ ಹೇಳಿದ್ದಾರೆ.
ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಮ್ಮತ ಬೆಲೆಗೆ ದಿನಸಿಗಳು ಸಿಗಲಿ ಎಂಬ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಆಹಾರ ಭದ್ರತಾ ಮಸೂದೆಯ ಅನುಷ್ಠಾನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 67 ರಷ್ಟು ಮಂದಿ ಪಡಿತರ ಚೀಟಿಗಳನ್ನು ಹೊಂದಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ತಲಾ ಒಬ್ಬರಿಗೆ 5 ಕೆಜಿಯಂತೆ ಆಹಾರ ಧಾನ್ಯ ವಿತರಿಸಲು ಮುಂದಾಗಿದ್ದು, 5 ಕೆಜಿಗೆ 1 ರಿಂದ 3 ರು. ವರೆಗೆ ಬೆಲೆ ನಿಗದಿ ಮಾಡಲಾಗುವುದು ಎಂದು ಥಾಮಸ್ ಹೇಳಿದರು.
2011 ಡಿಸೆಂಬರ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಆಹಾರ ಭದ್ರತಾ ಮಸೂದೆಯನ್ನು ಮಂಡಿಸಲಾಗಿತ್ತು. 2011ರ ಬಜೆಟ್ ಮಂಡನೆ ವೇಳೆ ಸಂಸತ್ನಲ್ಲಿ ಮಸೂದೆಗೆ ಅಂಗೀಕಾರ ಸಿಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮಸೂದೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ಮುಂದಿನ 15 ದಿನಗಳ ಒಳಗಾಗಿ ಮಸೂದೆಗೆ ಅಂಗೀಕಾರ ದೊರೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
2014ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಯುಪಿಎ ಸರ್ಕಾರ ಮತದಾರರನ್ನು ಓಲೈಸುವ ಸಲುವಾಗಿ ಭೂ ಸ್ವಾಧೀನಾ ಕಾಯ್ದೆ ಹಾಗೂ ಆಹಾರ ಭದ್ರತೆ ಮಸೂದೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣಾ ಅಖಾಡಕ್ಕೆ ಇಳಿಯಲು ಮುಂದಾಗಿದೆ. ಇದಕ್ಕಾಗಿ ಮುಂಬರುವ ಸಂಸತ್ ಕಲಾಪದಲ್ಲಿ ಈ ಎರಡು ಮಸೂದೆಗಳಿಗೂ ಅನುಮೊದನೆ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಸರ್ಕಾರದ ಹಗರಣಗಳನ್ನು ಗುರಿಯಾಗಿಸಿಕೊಂಡು ಯುಪಿಎ ಸರ್ಕಾರದ ವಿರುದ್ಧ ಚುನಾವಣೆ ಎದುರಿಸಲು ಸನ್ನದ್ಧವಾಗಿವೆ. ಆದರೆ ಕಾಂಗ್ರೆಸ್ ಪ್ರತಿಪಕ್ಷಗಳಿಗೆ ಹೇಗೆ ಉತ್ತರಿಸಲಿದೆ ಎಂದು ಕಾದು ನೋಡಬೇಕಿದೆ.