ಮೊದಲ ದಿನವೇ ರಾಜ್ಯದ ಜನತೆಗೆ ಭಾರಿ ಉಡುಗೊರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕರ್ನಾಟಕ ಜನತೆಗೆ..
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕರ್ನಾಟಕ ಜನತೆಗೆ ಹಲವಾರು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಹಲವಾರು ಜನಪ್ರಿಯ ನಿರ್ಣಯಗಳನ್ನು ಘೋಷಣೆ ಮಾಡಿದ್ದಾರೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಬಡ ಜನತೆ ಮತ್ತು ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆಗಳ ಪ್ರಸ್ತಾಪ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಯೋಜನೆಗಳ ಪಟ್ಟಿ ಈ ಕೆಳಗಿನಂತಿದೆ.
1 ರು.ಗೆ ಕೆಜಿ ಅಕ್ಕಿ ಯೋಜನೆ ಜೂನ್ 1ರಿಂದ ಜಾರಿ
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆಯಾದ ಪ್ರಮುಖ ಯೋಜನೆಯೆಂದರೆ 1 ರುಪಾಯಿಗೆ 1 ಕೆಜಿಯಂತೆ ತಿಂಗಳಿಗೆ ಪ್ರತಿ ಕುಟುಂಬಕ್ಕೆ 30ಕೆಜಿ ಅಕ್ಕಿ ನೀಡುವ ಯೋಜನೆ ಜೂನ್ 1ರಿಂದಲೇ ಜಾರಿಗೆ ಬರಲಿದೆ ಎಂದು ನೂತನ ಸಿಎಂ ಸಿದ್ದು ಹೇಳಿದ್ದಾರೆ.
ಈ ಯೋಜನೆಯ ಮೂಲಕ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 1 ರುಗೆ 1ಕೆಜಿಯಂತೆ ತಿಂಗಳಗೆ 30 ಕೆಜಿ ಅಕ್ಕಿ ನೀಡಲಾಗುತ್ತದೆ. ಈ ಯೋಜನೆ ಮುಂದಿನ ಜೂನ್ ತಿಂಗಳಿನಿಂದ ಜಾರಿಗೆ ಬರಲಿದೆ. ಈ ಯೋಜನೆಯ ಮೂಲಕ ರಾಜ್ಯಾದ್ಯಂತವಿರುವ ಸುಮಾರು 98 ಲಕ್ಷದ 17 ಸಾವಿರ ಬಡ ಕುಟುಂಬಗಳಿಗೆ ಅನುಕೂಲಕರವಾಗಲಿದೆ. ಈ ಯೋಜನೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ಸುಮಾರು 460 ಕೋಟಿ ರುಪಾಯಿ ಹೊರೆಯಾಗಲಿದೆ ಎಂದರು.
ಹಾಲಿನ ಪ್ರೋತ್ಸಾಹಧನ ಇಂದಿನಿಂದಲೇ ಜಾರಿ
ಹಾಲು ಉತ್ಪಾದಕರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು 2 ರು. ನಿಂದ 4ರು.ಗಳಿಗೆ ಏರಿಸಲಾಗಿದ್ದು, ರಾಜ್ಯಾದ್ಯಂತ ಸುಮಾರು 7.5 ಲಕ್ಷ ಹಾಲು ಉತ್ಪಾದಕರಿಗೆ ಇದರ ಅನುಕೂಲವಾಗಲಿದೆ. ಇದು ನಾಳೆಯಿಂದಲೇ ಜಾರಿಗೆ ಬರುತ್ತೆದೆ. ಈ ಯೋಜನೆಯಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ 496 ಕೋಟಿ ರುಪಾಯಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಸಿದ್ದು ತಿಳಿಸಿದರು.
ಗುಡಿಸಲು ರಹಿತ ರಾಜ್ಯ ನಿರ್ಮಾಣದ ಕನಸು
ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯನ್ನು 75 ಸಾವಿರದಿಂದ 1.20 ಲಕ್ಷ ರು.ಗಳಿಗೆ ಏರಿಸಲಾಗಿದೆ. ಇದರಿಂದಾಗಿ ರಾಜ್ಯದ ಸುಮಾರು 2.2 ಲಕ್ಷ ಫಲಾನುಭವಿಗಳಿಗೆ ಅನುಕೂಲಕರವಾಗುತ್ತದೆ. ಈ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶಕ್ಕೆ 1.200 ಕೋಟಿ ಖರ್ಚಾಗಲಿದ್ದು, ನಗರ ಪ್ರದೇಶಗಳಲ್ಲಿ 240 ಕೋಟಿ ರುಪಾಯಿ ವೆಚ್ಚವಾಗಲಿದೆ. ಈ ಯೋಜನೆಯಿಂದಾಗಿ ಸರ್ಕಾರಕ್ಕೆ 1.960 ಕೋಟಿ ರು.ಗಳು ಹೆಚ್ಚುವರಿ ಹೊರೆಯಾಗಲಿದೆ. ಅಲ್ಲದೆ ಪ್ರಸಕ್ತ ವರ್ಷದಲ್ಲಿ ಸರ್ಕಾರ ರಾಜ್ಯದ್ಯಂತ ಸುಮಾರು 3 ಲಕ್ಷ ಆಶ್ರಯ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದರಲ್ಲಿ 1 ಲಕ್ಷ ಮನೆಗಳನ್ನು ಕೇಂದ್ರ ಸರ್ಕಾರ ನಿರ್ಮಿಸಲಿದೆ. ಇನ್ನು 2 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ನಿರ್ಮಿಸಲಿದೆ. ಒಟ್ಟಾರೆ ರಾಜ್ಯಾದ್ಯಂತ ಸುಮಾರು 12 ಲಕ್ಷ ಮನೆಗಳನ್ನು ನಿರ್ಮಿಸುವ ಅವಶ್ಯಕತೆ ಇದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ನಮ್ಮ ರಾಜ್ಯ ಗುಡಿಸಲು ಮುಕ್ತವಾಗಲಿದೆ ಎಂದರು.
ಎಸ್‌ಸಿ, ಎಸ್‌ಟಿ ನಿಗಮ ಮಂಡಳಿಗಳ ಸಾಲ ಮನ್ನಾ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ನೀಡುತ್ತಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಈ ಯೋಜನೆಯಿಂದಾಗಿ ರಾಜ್ಯಾದ್ಯಂತ ಸುಮಾರು 1.87 ಲಕ್ಷ ಎಸ್‌ಸಿ ಮತ್ತು 46 ಸಾವಿರ ಎಸ್‌ಟಿ ಫಲಾನುಭವಿಗಳು ಮತ್ತು 26 ಲಕ್ಷ ಇತರೆ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಅನುಕೂಲವಾಗಲಿದೆ.
ಅಲ್ಲದೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಸುಮಾರು 514 ಕೋಟಿ ರು. ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗಿದ್ದು, ಈ ಯೋಜನೆಯಿಂದಾಗಿ ಸುಮಾರು 26 ಲಕ್ಷ ಇತರೆ ಹಿಂದುಳಿದ ಫಲಾನುಭವಿಗಳು ಮತ್ತು ಅಲ್ಪ ಸಂಖ್ಯಾತರ ಸುಮಾರು 362 ಕೋಟಿ ರು. ಸಾಲವನ್ನು ಮನ್ನಾ ಮಾಡಲಾಗಿದೆ. ಇದರಿಂದಾಗಿ 3 ಲಕ್ಷ ಅಲ್ಪ ಸಂಖ್ಯಾತ ಫಲಾನುಭವಿಗಳಿಗೆ ಅನುಕೂಲಕರವಾಗಲಿದೆ.
ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಯೋಜನೆ ಸಾಲ ಮನ್ನಾ
ವಿವಿಧ ಕಾರಣಗಳಿಂದ ವಿದ್ಯುತ್ ಬಿಲ್ ಬಾಕಿ ಪಾವತಿ ಮಾಡಲಾಗದ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಯ ಫಲಾನುಭವಿಗಳ ಸುಮಾರು 268 ಕೋಟಿ ರು.ಸಾಲ ಮನ್ನಾ ಮಾಡಲಾಗಿದೆ. ಇದರಿಂದ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಯೋಜನೆಯ ಅಡಿಯಲ್ಲಿ ಬರುವ ಸುಮಾರು 2 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ.
ಒಟ್ಟಾರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡಿರುವ ನಿರ್ಣಯಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು 4.409 ಕೋಟಿ 81 ಲಕ್ಷರು,ಗಳ ಹೆಚ್ಚುವರಿ ಹೊರೆ ಬೀಳಲಿದೆ.