ಪುಣೆ ಜೈಲಿನಲ್ಲಿ ಶರಣಾಗತಿ ಕೋರಿ ಸಂಜಯ್ ದತ್ ಅರ್ಜಿ
1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ..
ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರು, ಪುಣೆಯ ಯರವಾಡ ಜೈಲಿನಲ್ಲಿ ಶರಣಾಗಲು ತಮಗೆ ಅವಕಾಶ ನೀಡಬೇಕು ಎಂದು ಟಾಟಾ ಕೋರ್ಟ್‌ಗೆ ಮಂಗಳವಾರ ಮನವಿ ಮಾಡಿದ್ದಾರೆ.
ದತ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಎ.ಸನಪ್ ಅವರು, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಸರ್ಕಾರ ಹಾಗೂ ಸಿಬಿಐ ಪರವಾಗಿ ಪಬ್ಲಿಕ್ ಪ್ರಾಸಕ್ಯೂಟರ್ ದೀಪಕ್ ಸಾಲ್ವಿ ಅವರು ಕೋರ್ಟ್ ಗೆ ಹಾಜರಾಗಿದ್ದರು.
ಸಂಜಯ್ ದತ್ ಅವರ ಶರಣಾಗತಿ ಕಾಲಾವಕಾಶ ವಿಸ್ತರಿಸುವಂತೆ ಕೋರಿ ಬಾಲಿವುಡ್ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸುತ್ತಿದ್ದಂತೆ, ದತ್ ಅವರು ಪುಣೆ ಜೈಲಿನಲ್ಲಿ ಶರಣಾಗಲು ಅವಕಾಶ ಕೋರಿ ಟಾಡಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಇದೀಗ ನಿರ್ಮಾಪಕರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿರುವುದರಿಂದ ನಟ ಸಂಜಯ್ ದತ್ ಅವರು ನಾಳೆಯೇ ನ್ಯಾಯಾಲಯಕ್ಕೆ ಶರಣಾಗಬೇಕಾಗಿದ್ದು, ಬಾಲಿವುಡ್ ನಟ ಇನ್ನುಳಿದ 42 ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಲೆಬೇಕಾಗಿದೆ.