ಮಧು ಕೋಡಾಗೆ ತಾತ್ಕಾಲಿಕ ಜಾಮೀನು
ಹವಾಲಾ ಸೇರಿದಂತೆ ಇತರೆ ಭ್ರಷ್ಟಾಚಾರ ಹಗರಣದ ಆರೋಪಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ..
ರಾಂಚಿ: ಹವಾಲಾ ಸೇರಿದಂತೆ ಇತರೆ ಭ್ರಷ್ಟಾಚಾರ ಹಗರಣದ ಆರೋಪಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಜಾರ್ಖಂಡ್ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ತಮ್ಮ ತಾಯಿಯ ಆರೋಗ್ಯ ಸರಿಯಿಲ್ಲ ಎಂಬ ಕಾರಣ ನೀಡಿ ಜಾಮೀನ ಕೋರಿದ್ದ ಮಧು ಕೋಡಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಸಿ. ಮಿಶ್ರಾ ಅವರು, ಒಂದು ವಾರಗಳ ಕಾಲ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೆ ಒಂದು ವಾರ ಕಳೆದ ನಂತರ ಎಂಟನೇ ದಿನ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ಸೂಚಿಸಿದ್ದಾರೆ.
ಮಧು ಕೋಡಾ ಅವರು ತಮ್ಮ ತಾಯಿ ಅನಾರೋಗ್ಯದ ಕಾರಣ ನೀಡಿ ಎರಡನೇ ಬಾರಿ ಜಾಮೀನು ಪಡೆಯುತ್ತಿದ್ದಾರೆ. ಅವರ ತಾಯಿ ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮುಂಚೆ ಕೋರ್ಟ್ ಏಪ್ರಿಲ್ 15ರಂದು ಮೂರು ವಾರಗಳ ಕಾಲ ತಾತ್ಕಾಲಿಕ ಜಾಮೀನು ನೀಡಿತ್ತು. ನಂತರ ಕೋಡಾ ಮೇ 10ರಂದು ಸಿಬಿಐ ವಿಶೇಷ ಕೋರ್ಟ್ಗೆ ಶರಣಾಗಿದ್ದರು. ಬಹುಕೋಟಿ ಹವಾಲಾ ಹಗರಣ ಹಾಗೂ ಅಕ್ರಮ ಆಸ್ತಿ ಸಂಪಾದನೆ ಸೇರಿದಂತೆ ಇತರೆ ಭ್ರಷ್ಟಾಚಾರ ಪ್ರಕರಣ ಸಂಬಂಧ ಕೋಡಾ ಅವರನ್ನು ನವೆಂಬರ್ 30, 2009ರಲ್ಲಿ ಬಂಧಿಸಲಾಗಿತ್ತು.