ಐಪಿಎಲ್ ಬೆಟ್ಟಿಂಗ್ನಲ್ಲಿ ಸೋಲು; ಓರ್ವ ಬಾಲಕನ ಹತ್ಯೆ
ಐಪಿಎಲ್ ಬೆಟ್ಟಿಂಗ್ನಲ್ಲಿ ಸೋತ ಸಿಟ್ಟಿನಲ್ಲಿ ಬಾಲಕನನ್ನು ಅಪಹರಿಸಿ ನಂತರ ಹತ್ಯೆಗೈದ ಘಟನೆ ಮುಂಬೈಯಲ್ಲಿ ನಡೆದಿದೆ. ಮುಂಬೈಯ ವಜ್ರ ವ್ಯಾಪಾರಿಯೊಬ್ಬರ ಮಗ...
ಮುಂಬೈ: ಐಪಿಎಲ್ ಬೆಟ್ಟಿಂಗ್ನಲ್ಲಿ ಸೋತ ಸಿಟ್ಟಿನಲ್ಲಿ ಬಾಲಕನನ್ನು ಅಪಹರಿಸಿ ನಂತರ ಹತ್ಯೆಗೈದ ಘಟನೆ ಮುಂಬೈಯಲ್ಲಿ ನಡೆದಿದೆ. ಮುಂಬೈಯ ವಜ್ರ ವ್ಯಾಪಾರಿಯೊಬ್ಬರ ಮಗ 13ರ ಹರೆಯದ ಆದಿತ್ಯ ರಂಕಾ ಎಂಬ ಬಾಲಕ ದುಷ್ಕರ್ಮಿಗಳ ಮೋಸದಾಟದಲ್ಲಿ ಹತ್ಯೆಯಾಗಿದ್ದಾನೆ ಎಂದು ಬುಧವಾರ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 28ರ ಹರೆಯದ ವ್ಯಕ್ತಿ ಹಾಗು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಂಬೈ ಪೋಲಿಸ್ ಹೆಚ್ಚುವರಿ ಆಯುಕ್ತ ಕೃಷ್ಣ ಪ್ರಕಾಶ್, ದುಷ್ಕರ್ಮಿಗಳು 13ರ ಹರೆಯದ ಬಾಲಕನ ತಲೆಗೆ ಹೊಡೆದು ಸಾಯಿಸಿದ್ದಾರೆ. ಆತನನ್ನು ಕರೆದೊಯ್ದ ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದೀಗ ಬಂಧಿತ ಆರೋಪಿಗಳು ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಐಪಿಎಲ್ ಬೆಟ್ಟಿಂಗ್ನಲ್ಲಿ ಸೋತು 10 ಲಕ್ಷ ರು. ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಇವರು ಆದಿತ್ಯ ನನ್ನು ಅಪಹರಿಸಿ, ಹೆಚ್ಚಿನ ಹಣಕ್ಕಾಗಿ ಆದಿತ್ಯನ ಅಪ್ಪನಿಗೆ ಕರೆ ಮಾಡಿದ್ದಾರೆ. ಆದಿತ್ಯನ ಸಂಬಂಧಿ ಹಿಮಾಂಶು ಎಂಬಾತ ಆದಿತ್ಯನಿಗೆ ಸೋಮವಾರ ಮಧ್ಯಾಹ್ನ ಕರೆ ಮಾಡಿದ್ದು, ತನ್ನ ಗೆಳೆಯ ವಿಜಯ್ ಸಾಂಗ್ವಿಯ ಹೋಂಡಾ ಸಿಟಿ ಕಾರಿನಲ್ಲಿ ಸುತ್ತಾಡಿ ಬರೋಣ ಎಂದು ಹೇಳಿದ್ದನು.
ಸಾಂಗ್ವಿ ಆದಿತ್ಯನನ್ನು ಕರೆದುಕೊಂಡು ಹೋಗಿದ್ದರೆ, ಹಿಮಾಂಶು ಆದಿತ್ಯನ ಅಪ್ಪ ಜಿತೇಂದ್ರ ಅವರ ಮೇಲೆ ನಿಗಾ ಇರಿಸಿದ್ದನು. ಆದಿತ್ಯನನ್ನು ಅಪಹರಿಸಿದವರು ಜಿತೇಂದ್ರ ಅವರಿಗೆ ಕರೆ ಮಾಡಿ 30 ಲಕ್ಷ ರು. ಕೇಳಿದಾಗ ಜಿತೇಂದ್ರ ಅವರು ಹಿಮಾಂಶು ಜತೆ ವಿಪಿ ರೋಡ್ ಪೊಲೀಸ್ ಠಾಣೆಗೆ ತೆರಳಿ ಕೇಸು ದಾಖಲಿಸಿದ್ದಾರೆ.
ಆದಿತ್ಯನ ಅಪಹರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹಿಮಾಂಶು ಸಾಂಗ್ವಿಗೆ ಫೋನ್ ಮೂಲಕ ತಿಳಿಸಿದ್ದಾನೆ. ಪೊಲೀಸರು ಇನ್ನೇನು ಪತ್ತೆ ಹಚ್ಚಿ ಬಿಡುತ್ತಾರೆ ಎಂಬ ಭಯದಿಂದ ಈ ಯುವಕರು ಆದಿತ್ಯನ ಕೈ ನರವನ್ನು ತುಂಡರಿಸಿ ಹತ್ಯೆಗೈದು, ನಂತರ ಪನ್ವೇಲ್ನ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ.
ರಾಜಸ್ತಾನದಲ್ಲಿ ವಾಸವಾಗಿರುವ ಹಿಮಾಂಶು ಕಳೆದ ಶುಕ್ರವಾರವೇ ಈ ಯೋಜನೆ ಹೂಡಿದ್ದರು. ಬೆಟ್ಟಿಂಗ್ನಲ್ಲಿ 10 ಲಕ್ಷ ರು ನಷ್ಟವಾದುದಕ್ಕೆ ಯಾರನ್ನಾದರೂ ಅಪಹರಿಸಿ, ಅವರಿಂದ ಹಣ ಕೀಳಬಹುದು ಎಂದು ಅವರ ಯೋಜನೆಯಾಗಿತ್ತು. ಆದ್ದರಿಂದಲೇ ತಮ್ಮ ಸಂಬಂಧಿಯ ಮಗನನ್ನು ಅಪಹರಿಸಿ 30 ಲಕ್ಷ ರು. ಬೇಡಿಕೆಯೊಡ್ಡಲು ಇವರು ನಿಶ್ಚಯಿಸಿದ್ದರು ಎಂದು ಪ್ರಕಾಶ್ ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸರು ಆದಿತ್ಯನ ಅಪಹರಣದ ಬಗ್ಗೆ ತನಿಖೆ ನಡೆಸಲು ಮುಂದಾದಾಗ, ಭಯಗೊಂಡ ಯುವಕರು ಆದಿತ್ಯನನ್ನು ಹತ್ಯೆಗೈದಿದ್ದಾರೆ.
ಆದಿತ್ಯನ ಚಪ್ಪಲಿ ಹಿಮಾಂಶುನ ಕಾರಿನಲ್ಲಿ ಪತ್ತೆಯಾದ ಕಾರಣ ಆದಿತ್ಯನ ಅಪ್ಪನಿಗೆ ತನ್ನ ಮಗನ ಅಪಹರಣದಲ್ಲಿ ಹಿಮಾಂಶು ಕೈವಾಡವಿದೆ ಎಂದು ಗೊತ್ತಾಗಿದೆ.
ಇದೀಗ ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಅಪಹರಣ ಹಾಗು ಹತ್ಯೆ ನಡೆದುದು ಹೇಗೆ ಎಂಬುದನ್ನು ಪೊಲೀಸರಿಗೆ ವಿವರಿಸಿದ್ದಾರೆ. ಬಂಧಿತರಿಬ್ಬರೂ ಎಂಬಿಎ ವಿದ್ಯಾರ್ಥಿಗಳಾಗಿದ್ದು, ಇವರನ್ನು ಶಿಕ್ಷೆಗೊಳಪಡಿಸಲಾಗುವುದು ಎಂದು ಪ್ರಕಾಶ್ ಹೇಳಿದ್ದಾರೆ.