ನಾಳೆ ಟಾಡಾ ಕೋರ್ಟ್‌ಗೆ ಸಂಜಯ್ ಶರಣು
ಪುಣೆಯ ಯರವಾಡ ಜೈಲಿನಲ್ಲಿ ಶರಣಾಗತಿಗೆ ಅವಕಾಶ ಕೋರಿ ಟಾಡಾ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಬಾಲಿವುಡ್ ..
ಮುಂಬೈ: ಪುಣೆಯ ಯರವಾಡ ಜೈಲಿನಲ್ಲಿ ಶರಣಾಗತಿಗೆ ಅವಕಾಶ ಕೋರಿ ಟಾಡಾ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಬಾಲಿವುಡ್ ನಟ ಸಂಜಯ್ ದತ್ ಅವರು ಬುಧವಾರ ವಾಪಸ್ ಪಡೆದಿದ್ದು, ನಾಳೆ ಟಾಡಾ ಕೋರ್ಟ್ ಮುಂದೆಯೇ ಶರಣಾಗಲಿದ್ದಾರೆ.
1993 ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ ಅವರು, ತನಗೆ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದ್ದು, ವಿಶೇಷ ಕೋರ್ಟ್ ಮುಂದೆ ಶರಣಾಗುವ ಬದಲು ನೇರವಾಗಿ ಯರವಾಡ ಜೈಲಿಗೆ ಶರಣಾಗಲು ಅವಕಾಶ ನೀಡಬೇಕೆಂದು ಕೋರಿ ನಿನ್ನೆ ಟಾಡಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ದತ್ ಅವರು ಇಂದು ದಿಡೀರ್ ತಮ್ಮ ನಿರ್ಧಾರ ಬದಲಿಸಿದ್ದು, ಅರ್ಜಿ ಹಿಂಪಡೆಯುತ್ತಿರುವುದಾಗಿ ಮತ್ತು ದತ್ ಅವರು ನಾಳೆ ಕೋರ್ಟ್ ಮುಂದೆ ಶರಣಾಗುವುದಾಗಿ ಅವರ ವಕೀಲರು ತಿಳಿಸಿದ್ದಾರೆ.
ಕಾಲಾವಕಾಶ ಅರ್ಜಿ ತಿರಸ್ಕೃತ: ನಿನ್ನೆ ದತ್ ಶರಣಾಗತಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಇಬ್ಬರು ಸಿನಿಮಾ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ದತ್ ಅವರು ನಟಿಸುತ್ತಿರುವ ಎರಡು ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡಿಲ್ಲ. ಹಾಗಾಗಿ ಶರಣಾಗಲು ಇನ್ನಷ್ಟು ಕಾಲಾವಕಾಶ ನೀಡಿದರೆ ಅದನ್ನು ಪೂರ್ಣಗೊಳಿಸಲು ಸುಲಭವಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಆದರೆ, ವಿಸ್ತರಣೆ ಕೋರಿ ಸಲ್ಲಿಸುವ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ ಎಂದಿರುವ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.