ನಿತೀಶ್ ಕುಮಾರ್ ಆರೆಸ್ಸೆಸ್ಸ್ನ ಗಿಳಿ: ಲಾಲೂ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್ಸ್)ನ ಗಿಳಿ ಎಂದು ರಾಷ್ಟ್ರೀಯ ಜನತಾ ದಳದ...
ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್ಸ್)ನ ಗಿಳಿ ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ. ಅದೇ ವೇಳೆ ಬಿಜೆಪಿಯ ಹಿರಿಯ ನಾಯಕರಾದ ಎಲ್. ಕೆ ಆಡ್ವಾಣಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಅವಕಾಶವಾದಿಗಳು ಎಂದು ಲಾಲೂ ನುಡಿದಿದ್ದಾರೆ.
ಗಾಂಧಿ ಮೈದಾನದಲ್ಲಿ ನಡೆದ ಪರಿವರ್ತನ್ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಲಾಲೂ, ನಿತೀಶ್ ಅವರು ಸರ್ವಾಧಿಕಾರಿಯಾಗಿದ್ದು, ಅವರು ಸಾಮಾನ್ಯ ಜನರ ಮಾತಿಗೆ ಕಿವಿಗೊಡುವುದಿಲ್ಲ. ಆದಾಗ್ಯೂ, ಆರ್ಜೆಡಿ ಆಯೋಜಿಸಿರುವ ಪರಿವರ್ತನ್ ರ್ಯಾಲಿ ನಿತೀಶ್ ಅವರನ್ನು ಅಧಿಕಾರದಿಂದಿಳಿಸಲಿರುವ ಪೂರ್ವಸೂಚಕ ಎಂದು ಲಾಲೂ ಹೇಳಿದ್ದಾರೆ.
ಬಿಹಾರದ ಜನರನ್ನು ನಿತೀಶ್ ಕುಮಾರ್ರ ಸರ್ಕಾರ ಮೋಸಗೊಳಿಸಿದ್ದು, ಈ ಸರ್ಕಾರದ ಅವಧಿಯಲ್ಲೇ ರಾಜ್ಯದಲ್ಲಿ ಅತ್ಯಾಚಾರಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗದವರು ಸುರಕ್ಷಿತರಾಗಿಲ್ಲ. ಮಾತ್ರವಲ್ಲದೆ ವಿದ್ಯಾಭ್ಯಾಸ ಕ್ಷೇತ್ರವೂ ಪುರೋಗತಿ ಹೊಂದಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಲಂಚ ತಾಂಡವವಾಡುತ್ತಿದೆ ಎಂದು ಯಾದವ್ ಹೇಳಿದ್ದಾರೆ.
2005ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಇದೇ ಮೊದಲ ಬಾರಿಗೆ ಆರ್ಜೆಡಿ ಗಾಂಧಿ ಮೈದಾನದಲ್ಲಿ ಇಂಥದೊಂದು ಬೃಹತ್ ರ್ಯಾಲಿಯನ್ನು ಆಯೋಜಿಸಿದೆ.