ನೌಕಾಪಡೆಯಲ್ಲಿ ಮತ್ತೆ ಸೆಕ್ಸ್ ಹಗರಣ: ತನಿಖೆಗೆ ಆಂಟನಿ ಆದೇಶ
ನೌಕಾಪಡೆಯಲ್ಲಿ ನಡೆದ ಮತ್ತೊಂದು ಸೆಕ್ಸ್ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ರಕ್ಷಣಾ..
ನವದೆಹಲಿ: ನೌಕಾಪಡೆಯಲ್ಲಿ ನಡೆದ ಮತ್ತೊಂದು ಸೆಕ್ಸ್ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು, ಪ್ರಕರಣದ ಕುರಿತು ತನಿಖೆಗೆ ಆದೇಶಿಸಿರುವುದಾಗಿ ಬುಧವಾರ ಹೇಳಿದ್ದಾರೆ.
ನೌಕಾಪಡೆಯು ಮತ್ತೊಂದು ಸೆಕ್ಸ್ ಹಗರಣಕ್ಕೆ ಸಾಕ್ಷಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಕ್ಷಣಾ ಸಚಿವರು, ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳವುದಾಗಿ ಭರವಸೆ ನೀಡಿದ್ದಾರೆ.
ದೂರು ಬಂದ ತಕ್ಷಣವೇ ನಾನು ತನಿಖೆಗೆ ಆದೇಶಿಸಿದ್ದೇನೆ. ಹೀಗಾಗಿ ತನಿಖೆ ಮುಗಿಯುವವರೆಗೆ ತಾವು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಆಂಟನಿ ವರದಿಗಾರರಿಗೆ ತಿಳಿಸಿದ್ದಾರೆ.
ಇನ್ನು ತಮ್ಮ ಆರೋಪವನ್ನು ರಕ್ಷಣಾ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಬಗ್ಗೆ ಇಲಾಖೆಯ ತನಿಖೆಗೆ ಆದೇಶಿಸಿದ್ದಾರೆ ಎಂದು ತಮ್ಮ ಪತಿ ವಿರುದ್ಧ ಆರೋಪ ಮಾಡಿರುವ ಮಹಿಳೆ, ಆಂಟನಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಲೆಫ್ಟಿನೆಂಟ್ ಕಮಾಂಡರ್ ಆಗಿರುವ ನನ್ನ ಪತಿಯು ಕಾರವಾರದ ನೌಕಾ ಹಡಗು ರಿಪೇರಿ ಯಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಹೋದ್ಯೋಗಿಗಳ ಜತೆಗೆ ಲೈಂಗಿಕ ಸಂಪರ್ಕ ನಡೆಸುವಂತೆ ಹಾಗೂ ಆಲ್ಕೋಹಾಲ್ ಸೇವಿಸುವಂತೆ ನನಗೆ ತೀವ್ರ ಒತ್ತಡ ಹೇರಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನ ಬೆತ್ತಲೆ ಫೋಟೋವನ್ನು ಇಂಟರ್ನೆಟ್ಗೆ ಅಪ್ಲೋಡ್ ಮಾಡುತ್ತೇನೆ ಎಂಬ ಬೆದರಿಕೆಯನ್ನೂ ಹಾಕಿದ್ದರು. ಇದರಿಂದಾಗಿ ಹೆದರಿ ನಾನು ತವರು ಮನೆಗೆ ಬಂದಿದ್ದೇನೆ. ಅವರು ನೀಡುವ ದೈಹಿಕ ಹಾಗೂ ಮಾನಸಿಕ ಹಿಂಸೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕೆ ದೂರು ನೀಡಿದ್ದರು.
ಆಂಟನಿ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ವಿವರಣೆ ನೀಡಿದ ನೌಕಾ ಅಧಿಕಾರಿಯ ಪತ್ನಿಯು, ತನ್ನ ಪತಿಯ ವಿರುದ್ಧ ನಾನು ಮತ್ತು ನನ್ನ ಮನೆಯವರು ನೀಡಿದ ದೂರಿನ ಬಗ್ಗೆ ಇಲಾಖೆ ತನಿಖೆಗೆ ಅವಕಾಶ ನೀಡಿರುವುದಕ್ಕೆ ಸಮಾಧಾನವಾಗಿದೆ ಎಂದಿದ್ದಾರೆ.