ಸೊಸೆಯನ್ನು ಮನೆಗೆಲಸದವಳೆಂದು ಪರಿಗಣಿಸದಿರಿ: ಸುಪ್ರೀಂ
ಸೊಸೆಯನ್ನು ಮನೆಗೆಲಸದವಳೆಂದು ಪರಿಗಣಿಸದೆ ಆಕೆಯನ್ನು ತಮ್ಮ ಕುಟುಂಬದ ಸದಸ್ಯೆಯೆಂದೇ ಪರಿಗಣಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ...
ನವದೆಹಲಿ: ಸೊಸೆಯನ್ನು ಮನೆಗೆಲಸದವಳೆಂದು ಪರಿಗಣಿಸದೆ ಆಕೆಯನ್ನು ತಮ್ಮ ಕುಟುಂಬದ ಸದಸ್ಯೆಯೆಂದೇ ಪರಿಗಣಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹೇಳಿಕೆ ಮೂಲಕ ಹಲವಾರು ಕುಟುಂಬಗಳಲ್ಲಿ ದೈಹಿಕ ದೌರ್ಜನ್ಯಕ್ಕೊಳಗಾಗುತ್ತಿರುವ ಸೊಸೆಯಂದಿರ ಬಗ್ಗೆ ಸುಪ್ರೀಂ ಕೋರ್ಟ್ ಕಾಳಜಿ ವ್ಯಕ್ತಪಡಿಸಿದೆ.
ಹೆಣ್ಣೊಬ್ಬಳು ಮದುವೆಯಾಗಿ ಬರುವ ಮನೆಯಲ್ಲಿ ಹೆಣ್ಣಿಗೆ ಗೌರವವನ್ನು ನೀಡಬೇಕು, ಇದು ಉತ್ತಮ ಸಮಾಜಕ್ಕೆ ನಾಂದಿಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯಾವುದೇ ವೈರುಧ್ಯಗಳಿದ್ದರೂ ಮದುವೆಯಾಗಿ ಮನೆ ತುಂಬುವ ಹೆಣ್ಣನ್ನು ಪ್ರೀತ್ಯಾದರಗಳಿಂದಲೇ ಬರ ಮಾಡಿಕೊಳ್ಳಬೇಕು. ಅವಳಿಗೆ ಕುಟುಂಬದ ಪ್ರೀತಿ ಹಾಗು ಗೌರವವನ್ನು ನೀಡಬೇಕು. ಆಕೆಯನ್ನು ಮನೆಗೆಲಸದವಳಂತೆ ಕಾಣುವುದು ಸರಿಯಲ್ಲ.
ಅದೇ ವೇಳೆ ಆಕೆಯನ್ನು ಯಾವುದೇ ವೇಳೆ ತವರಿಗಟ್ಟಬಹುದು ಎಂಬ ನಿಲುವು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಪೀಠದ ನ್ಯಾಯಮೂರ್ತಿ ಕೆ.ಎಸ್ ರಾಧಾಕೃಷ್ಣನ್ ಮತ್ತು ದೀಪಕ್ ಮಿಶ್ರಾ ಹೇಳಿದ್ದಾರೆ.
ಅತ್ತೆ ಮನೆಯಲ್ಲಿ ವರ ದಕ್ಷಿಣೆ ಕಿರುಕುಳಕ್ಕೊಳಗಾಗಿ ಸೊಸೆಗೆ ದೈಹಿಕ ಹಾಗು ಮಾನಸಿಕ ಹಿಂಸೆಯನ್ನು ನೀಡಲಾಗುತ್ತದೆ. ಇನ್ನು ಕೆಲವೆಡೆ ಸೊಸೆಯಂದಿರನ್ನು ಬೆಂಕಿ ಹಚ್ಚಿ ಸಾಯಿಸಲಾಗುತ್ತದೆ ಇಲ್ಲವೇ ಆತ್ಮಹತ್ಯೆಗೆ ಪ್ರೇರೇಪಿಸಲಾಗುತ್ತದೆ. ಇಂಥಾ ಕೆಟ್ಟ ವರ್ತನೆಗಳು ಸಮಾಜದಿಂದ ದೂರ ಸರಿಯಬೇಕಾಗಿದೆ. ಮದುವೆಯಾಗಿ ಮನೆತುಂಬುವ ಹೆಣ್ಣು ಕೂಡಾ ನಮ್ಮದೇ ಕುಟುಂಬದ ಅಂಗ ಎಂದು ಯೋಚಿಸಿದರೆ ಮಾತ್ರ ಹೆಣ್ಣಿನ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.