ಸ್ಪಾಟ್ ಫಿಕ್ಸಿಂಗ್ : ದೆಹಲಿ ಪೊಲೀಸ್ ಸುದ್ದಿಗೋಷ್ಠಿಯ ಮುಖ್ಯಾಂಶಗಳು
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರರಾದ ಶ್ರೀಶಾಂತ್, ಅಜಿತ್ ಚಂಡೀಲಾ...
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರರಾದ ಶ್ರೀಶಾಂತ್, ಅಜಿತ್ ಚಂಡೀಲಾ ಮತ್ತು ಅಂಕಿತ್ ಚೌವಾಣ್ ಹೇಗೆ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ವಿವರಿಸಲು ದೆಹಲಿ ಪೊಲೀಸರು ಗುರುವಾರ ಅಪರಾಹ್ಣ ಸುದ್ದಿಗೋಷ್ಠಿ ನಡೆಸಿದ್ದಾರೆ.
ದೆಹಲಿ ಪೊಲೀಸ್ ಕಮಿಷನರ್ ಅವರ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಹೀಗಿವೆ:
ಸ್ಪಾಟ್ ಫಿಕ್ಸಿಂಗ್ ಯಾವ ರೀತಿ ನಡೆಯುತ್ತದೆ ಎಂಬುದನ್ನು ಪೊಲೀಸರು ವಿವರಿಸಿದ್ದು ಹೀಗೆ:
ನಿರ್ದಿಷ್ಟ ಓವರ್ಗಳಲ್ಲಿ ಇಂತಿಷ್ಟು ರನ್ಗಳನ್ನು ನೀಡಬೇಕೆಂದು ಬುಕ್ಕಿ ಮತ್ತು ಆಟಗಾರರ ನಡುವೆ ಒಪ್ಪಂದವಾಗಿರುತ್ತದೆ. ಇಂತಿಷ್ಟು ರನ್ಗಳನ್ನು ಆಟಗಾರರು ಯಾವಾಗ ನೀಡುತ್ತಾರೆ ಎಂಬುದನ್ನು ಆಟಗಾರರು ಬುಕ್ಕಿಗಳಿಗೆ ಸಂದೇಶ ರವಾನಿಸುವ ಮೂಲಕ ತಿಳಿಸಬೇಕು. ಅಂದರೆ ಸಮಯ ನೋಡಿಕೊಳ್ಳುವ ಮೂಲಕ ಇಲ್ಲವೇ, ಫೀಲ್ಡ್ನಲ್ಲಿ ಒಂದಷ್ಟು ಸಮಯ ವ್ಯರ್ಥ ಮಾಡುವ ಮೂಲಕ ಗುಪ್ತ ಸಂದೇಶವನ್ನು ಬುಕ್ಕಿಗಳಿಗೆ ರವಾನಿಸಲಾಗುತ್ತದೆ.
-------------
ಈಗಾಗಲೇ ಸ್ಪಾಟ್ ಬುಕ್ಕಿಂಗ್ ಆರೋಪದಲ್ಲಿ ಶ್ರೀಶಾಂತ್ ,ಅಂಕಿತ್ ಚೌವಾಣ್ ಮತ್ತು ಅಜಿತ್ ಚಾಂಡೀಲಾರನ್ನು ಬಂಧಿಸಲಾಗಿದೆ.
-----------
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯಿಂದ 7 ಬುಕ್ಕಿಗಳನ್ನು ಹಾಗು ದೆಹಲಿಯಿಂದ ಮೂವರು ಬುಕ್ಕಿಗಳನ್ನು ಬಂಧಿಸಲಾಗಿದೆ. ಇನ್ನು ಇಬ್ಬರು ಬುಕ್ಕಿಗಳಿಗಾಗಿ ದೆಹಲಿಯಲ್ಲಿ ಶೋಧ ನಡೆದಿದೆ.
------------
ದೆಹಲಿ ಪೊಲೀಸರ ವಿಶೇಷ ತಂಡವು ಶ್ರೀಶಾಂತ್ರನ್ನು ಮುಂಬೈಯಲ್ಲಿರುವ ಆತನ ಸ್ನೇಹಿತನ ಮನೆಯಿಂದ ಹಾಗು ಇನ್ನಿಬ್ಬರು ಆಟಗಾರರನ್ನು ನರಿಮನ್ ಪಾಯಿಂಟ್ನಲ್ಲಿರುವ ಹೋಟೆಲ್ನಿಂದ ನಿನ್ನೆ ರಾತ್ರಿ ಬಂಧಿಸಲಾಗಿತ್ತು.
------------
ಬಲ್ಲಮೂಲಗಳ ಪ್ರಕಾರ ದೆಹಲಿ ಪೊಲೀಸರು ಕ್ರಿಕೆಟಿಗರು ಹಾಗು ಬುಕ್ಕಿಗಳ ನಡುವಿನ ಫೋನ್ ಸಂಭಾಷಣೆಯನ್ನು ರೆಕಾರ್ಡಿಂಗ್ ಮಾಡುವ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
----------------------
ಈ ಸ್ಪಾಟ್ ಫಿಕ್ಸಿಂಗ್ನ ಪ್ರಧಾನ ರುವಾರಿ ವಿದೇಶದಲ್ಲಿದ್ದಾರೆ
--------------------
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಜನರು ಬಂಧಿತರಾಗುವ ಸಾಧ್ಯತೆಯಿದೆ. ಇನ್ಯಾವ ಆಟಗಾರರು ಬಂಧಿತರಾಗುವ ಸಾಧ್ಯತೆಗಳಿಲ್ಲ. ಪೊಲೀಸರು ಬುಕ್ಕಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ರಾಜಸ್ತಾನ ರಾಯಲ್ಸ್ ತಂಡ ಮಾತ್ರ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದೆ. ಈ ಪ್ರಕರಣದಲ್ಲಿ ಯಾವುದೇ ಬ್ಯಾಟ್ಸ್ಮೆನ್ ಗಳು ಭಾಗಿಯಾಗಿಲ್ಲ.
--------------------
ಸ್ಪಾಟ್ ಫಿಕ್ಸಿಂಗ್ನಲ್ಲಿ ಭೂಗತ ಲೋಕದ ನಂಟು ಇದೆ. ಆದರೆ ಇದರ ಬಗ್ಗೆ ಈಗಲೇ ಹೆಚ್ಚಿನ ಮಾಹಿತಿಗಳನ್ನು ನಾವು ನೀಡುವುದಿಲ್ಲ.
------------------------
ಶೌನ್ ಟೈಟ್ ಎಂಬಾತನ ಮೇಲೆಯೂ ಪೊಲೀಸ್ ನಿಗಾ ಇರಿಸಿದೆಯೇ? ಎಂಬ ಪ್ರಶ್ನೆಗೆ, ಈ ಪ್ರಕರಣದಲ್ಲಿ ಟೈಟ್ ಹೆಸರು ಸೇರಿಲ್ಲ ಎಂದು ಕಮಿಷನರ್ ಉತ್ತರಿಸಿದ್ದಾರೆ.
--------------------------
ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಯುತ್ತಿದೆ ಎಂಬ ಮಾಹಿತಿ ದೆಹಲಿ ಪೊಲೀಸರಿಗೆ ಈ ಹಿಂದೆಯೇ ಲಭಿಸಿತ್ತು. ಈ ಬಗ್ಗೆ ನಾವು ಕ್ರಿಕೆಟಿಗರ ಮೇಲೆ ನಿಗಾ ಇರಿಸಿದ್ದೆವು. ಇದೀಗ ಮೂವರು ಕ್ರಿಕೆಟಿಗರ ಹೆಸರನ್ನು ಬಹಿರಂಗ ಪಡಿಸಿದ್ದೇವೆ.
----------------------
ಮೇ 9,2013 ಮೊಹಲಿಯಲ್ಲಿ ರಾಜಸ್ತಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ನಡುವೆ ನಡೆದ ಪಂದ್ಯವೂ ಫಿಕ್ಸ್ ಆಗಿತ್ತು. ಶ್ರೀಶಾಂತ್ ತನ್ನ ಎರಡನೇ ಓವರ್ನಲ್ಲಿ ಟವೆಲ್ನ್ನು ತನ್ನ ಟ್ರೌಸರ್ಸ್ಗೆ ಸಿಕ್ಕಿಸುವ ಮೂಲಕ ಬುಕ್ಕಿಗಳಿಗೆ ಸಂದೇಶ ರವಾನೆ ಮಾಡಿದ್ದನು. ಮೊದಲನೇ ಓವರ್ನಲ್ಲಿ ಟವೆಲ್ ಇಲ್ಲದೆಯೇ ಬೌಲಿಂಗ್ ಮಾಡಿದ ಶ್ರೀಶಾಂತ್ ಎರಡನೇ ಓವರ್ನಲ್ಲಿ ಟವೆಲ್ ಬಳಸಿದ್ದ. ಮಾತ್ರವಲ್ಲದೆ ಬುಕ್ಕಿಗಳಿಗೆ ಸ್ಪಲ್ಪ ಕಾಲಾವಕಾಶ ನೀಡುವುದಕ್ಕಾಗಿ ವಾರ್ಮಪ್ ವ್ಯಾಯಾಮವನ್ನೂ ಮಾಡಿದ್ದ.
-----------------------
ಮೇ 5, 2013ರಂದು ಜೈಪುರದಲ್ಲಿ ಪುಣೆ ವಾರಿಯರ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಸ್ಪಾಟ್ ಫಿಕ್ಸಿಂಗ್ ನಡೆದಿತ್ತು. ಈ ಪಂದ್ಯದಲ್ಲಿ ಚಂಡೀಲಾ ತನ್ನ ಎರಡನೇ ಓವರ್ನಲ್ಲಿ 14ರನ್ ನೀಡಬೇಕಾಗಿತ್ತು. ಆದರೆ ಚಂಡೀಲಾ ಬುಕ್ಕಿಗಳಿಗೆ ಸಿಗ್ನಲ್ ನೀಡಲು ಮರೆತ ಕಾರಣ, ಬುಕ್ಕಿಗಳಿಗೆ ಬೆಟ್ಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಚಂಡೀಲಾನಿಗೆ ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಬುಕ್ಕಿಗಳು ಹೇಳಿದ್ದರು. ಈ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಮ್ಯಾಚ್ನ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಬಳಸಲಾಗಿದೆ.