ಬುಕ್ಕಿಗಳ ಮಧ್ಯವರ್ತಿಯಾಗಿ ಕಾರ್ಯವೆಸಗಿದ್ದ ಕ್ರಿಕೆಟಿಗ ಅಮಿತ್ ಸಿಂಗ್
ಸ್ಪಾಟ್ ಫಿಕ್ಸಿಂಗ್ನಲ್ಲಿ ಕ್ರಿಕೆಟಿಗರು ಮತ್ತು ಬುಕ್ಕಿಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯವೆಸಗಿದ್ದು ರಾಜಸ್ತಾನ್ ರಾಯಲ್ಸ್...
ನವದೆಹಲಿ: ಸ್ಪಾಟ್ ಫಿಕ್ಸಿಂಗ್ನಲ್ಲಿ ಕ್ರಿಕೆಟಿಗರು ಮತ್ತು ಬುಕ್ಕಿಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯವೆಸಗಿದ್ದು ರಾಜಸ್ತಾನ್ ರಾಯಲ್ಸ್ ತಂಡದ ಮಾಜಿ ಆಟಗಾರ ಅಮಿತ್ ಸಿಂಗ್. ಅಮಿತ್ ಸಿಂಗ್ನ ಮೂಲಕವೇ ಚಂದ್ರೇಶ್ ಎಂಬ ಬುಕ್ಕಿ ಕ್ರಿಕೆಟಿಗರ ಜತೆ ಸಂಪರ್ಕ ಹೊಂದಿಕೊಂಡಿದ್ದನು. ಚಂದ್ರೇಶ್ ಈಗ ಪೊಲೀಸ್ ಬಂಧನದಲ್ಲಿದ್ದಾರೆ.
ಅಮಿತ್ ಅವರನ್ನು ಗುರುವಾರ ಅಹಮದಾಬಾದ್ನಿಂದ ಬಂಧಿಸಲಾಗಿತ್ತು. ಈತ ಫೋನ್ ಮೂಲಕ ಕ್ರಿಕೆಟಿಗರನ್ನು ಸಂಪರ್ಕಿಸಿ ಡೀಲ್ ನಡೆಸಿರುವುದರ ಬಗ್ಗೆ ಸಾಕ್ಷ್ಯಗಳು ಪೊಲೀಸರಿಗೆ ಲಭಿಸಿದ್ದವು.
ಐಪಿಎಲ್ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತರಾಗಿರುವ 11 ಬುಕ್ಕಿಗಳಲ್ಲಿ ಅಮಿತ್ ಕೂಡಾ ಸೇರಿದ್ದಾರೆ. ಈ ಹಿಂದೆ ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಆಡಿದ್ದ ಅಮಿತ್ರನ್ನು ಕಳೆದ ವರ್ಷವಷ್ಟೇ ತಂಡದಿಂದ ಕೈ ಬಿಡಲಾಗಿತ್ತು.
2012-13ರ ಅವಧಿಯಲ್ಲಿ ರಣಜಿ ಟ್ರೋಫಿ ಪಂದ್ಯದಲ್ಲಿ ಗುಜರಾತ್ನ್ನು ಪ್ರತಿನಿಧೀಕರಿಸಿದ್ದ ಅಮಿತ್ 2009 ರಿಂದ 2012ರ ವರೆಗೆ ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಸ್ಥಾನಗಿಟ್ಟಿಸಿ ಒಟ್ಟು 23 ಪಂದ್ಯಗಳನ್ನಾಡಿದ್ದರು.
ಅಮಿತ್ ಅವರನ್ನು ಐದು ದಿನಗಕಳ ಹಿಂದೆಯೇ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಗುರುವಾರ ಬಂಧಿಸಿದ್ದಾರೆ. ಪ್ರಥಮ ಮಾಹಿತಿ ವರದಿಯಲ್ಲಿ 31ರ ಹರೆಯದ ಸಿಂಗ್ ಹೆಸರು ಅಮಿತ್ ಕುಮಾರ್, ಅಹಮದಾಬಾದ್ ನಿವಾಸಿ, ಗುಜರಾತ್ ಎಂದು ನಮೂದಾಗಿತ್ತು.
2009ರ ಐಪಿಎಲ್ ಪಂದ್ಯದಲ್ಲಿ ಶೇನ್ ವಾರ್ನ್ ನಾಯಕತ್ವದ ಟೀಂನಲ್ಲಿ ಪಾದಾರ್ಪಣೆ ಮಾಡಿದ್ದ ಅಮಿತ್ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಆದರೆ ಬೌಲಿಂಗ್ ವಿವಾದಾತ್ಮಕವಾಗಿದ್ದು, ನಂತರ ಅವರ ಆಟಗಳಿಗೆ ನಿಷೇಧ ಹೇರುವ ಮೂಲಕ ಹೊರಗಿಡಲಾಗಿತ್ತು.