ಸಾಮೂಹಿಕ ಅತ್ಯಾಚಾರ, ಬಾಲಕಿ ಸಾವು
ಬಲ್ಲಿಯಾ: ಸಾಮೂಹಿಕ ಅತ್ಯಾಚಾರಕ್ಕೀಡಾಗಿ ದುಷ್ಕರ್ಮಿಗಳಿಂದ ಬೆಂಕಿಗಾಹುತಿಯಾಗಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಮೇ 11ರಂದು ಉತ್ತರ ಪ್ರದೇಶದ ಚಿತ್ಬಾದ್ಗಾನ್ ಎಂಬ ಹಳ್ಳಿಯಲ್ಲಿ 15 ವರ್ಷದ ಬಾಲಕಿ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಶೇ. 75 ರಷ್ಟು ದೇಹದ ಭಾಗ ಸುಟ್ಟುಹೋಗಿದ್ದರಿಂದ ಆಕೆ ಇಂದು ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತೇಜ್ನಾಥ್ ಪಲ್, ಉಪೇಂದ್ರ ಮತ್ತು ಕೇದರ್ನಾಥ್ ಎಂಬ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಈಗಾಗಲೇ ಉಪೇಂದ್ರ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು ಇನ್ನಿಬ್ಬರು ತಲೆಮರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದೇ ವೇಳೆ ಘಟನೆಯನ್ನು ಖಂಡಿಸಿರುವ ಬಿಎಸ್ಪಿ ಸಂಸದ ರಾಮಶಂಕರ್ ವಿದ್ಯಾರ್ಥಿ, ಬಾಲಕಿಗೆ ಚಿಕಿತ್ಸೆ ಸರಿಯಾಗಿ ನೀಡಿಲ್ಲ ಹಾಗೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದ್ದಾರೆ.