ಸ್ಪಾಟ್ ಫಿಕ್ಸಿಂಗ್: ಚೆನ್ನೈಯಲ್ಲಿ 5 ಬುಕ್ಕಿಗಳ ಬಂಧನ
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮೂವರು ಆಟಗಾರರ ಬಂಧನವಾದ ನಂತರ ಶುಕ್ರವಾರ ತಮಿಳ್ನಾಡು ಪೊಲೀಸರು ಐವರು...
ಚೆನ್ನೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮೂವರು ಆಟಗಾರರ ಬಂಧನವಾದ ನಂತರ ಶುಕ್ರವಾರ ತಮಿಳ್ನಾಡು ಪೊಲೀಸರು ಐವರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಇವರಿಂದ ಹಣ, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳನ್ನು ವಶ ಪಡಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ತಮಿಳ್ನಾಡು ಪೊಲೀಸರು 9 ಸ್ಥಳಗಳಲ್ಲಿ ಬುಕ್ಕಿಗಳಿಗಾಗಿ ಶೋಧ ನಡೆಸಿದ್ದು, ಶುಕ್ರವಾರ ಬೆಳಗ್ಗೆ ಐವರು ಕ್ರಿಕೆಟ್ ಬುಕ್ಕಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದು ಮ್ಯಾಚ್ ಫಿಕ್ಸಿಂಗ್ ಅಲ್ಲ, ಬೆಟ್ಟಿಂಗ್. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅಪರಾಧ ದಳ- ಅಪರಾಧ ತನಿಖಾ ಇಲಾಖೆ (ಸಿಬಿಸಿಐಡಿ ) ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರು ನಡೆಸಿದ ಬುಕ್ಕಿಗಳ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 15 ಲಕ್ಷ ರು, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಹಾಗು ಫೋನ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಬುಕ್ಕಿಗಳ ಮೇಲೆ ದಾಳಿ ನಡೆಸಿದ್ದರು. ಕೆಲವೊಂದು ಬುಕ್ಕಿಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಅದೇ ವೇಳೆ ಇವರಿಗೆ ವಿದೇಶದ ನಂಟು ಇದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.