ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೂತನ ಸಚಿವರಿಗೆ ಸಿಎಂ ಸಿದ್ದು ನೀತಿಪಾಠ

ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಚಿವರಿಗೆ...

Vishwanath S
Updated On : 18 May 2013, 5:40 am

ಬೆಂಗಳೂರು: ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಚಿವರಿಗೆ ನೀತಿಪಾಠ ಬೋಧಿಸಿದ್ದಾರೆ.

ಸಚಿವ ಸಂಪುಟ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರವನ್ನು ಅಭಿವೃದ್ದಿಯ ಪತದಲ್ಲಿ ಕೊಂಡೊಯ್ಯುವ ಮೂಲಕ ದೇಶದಲ್ಲಿ ರಾಜ್ಯವನ್ನು ಮತ್ತೊಮ್ಮೆ ರಾರಾಜಿಸುವವಂತೆ ಮಾಡಬೇಕಾಗಿದೆ ಎಂದು ಅಭಿವೃದ್ದಿ ಮಂತ್ರವನ್ನು ಬೋಧಿಸಿದ ಅವರು, ಮುಖ್ಯಮಂತ್ರಿಯಾಗಿ ಆಡಳಿತಾತ್ಮಕ, ಸಂಘಟನೆ ಹಾಗೂ ಸರ್ಕಾರದ ಉತ್ತಮ ಭವಿಷ್ಯಕ್ಕಾಗಿ ಕೆಲವೊಂದು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುವುದು ನನ್ನ ಕರ್ತವ್ಯ ಎಂದರು.

ಭ್ರಷ್ಟಾಚಾರದ ವಿಚಾರದಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ನಮಗೆ ಅಧಿಕಾರ ಕೊಟ್ಟಿದ್ದಾರೆ. ಆ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು. ರಾಜ್ಯದಲ್ಲಿ ಭ್ರಷ್ಟಾಚಾರದ ಬೀಜವನ್ನು ಕಿತ್ತೋಗೆಯಬೇಕಿದೆ ಎಂದ ಅವರು, ಬಿಜೆಪಿ ಮಾಡಿದ ಕೆಲಸವನ್ನು ನಾವು ಮಾಡಬಾರದು. ರಾಜ್ಯದ ಜನರ ಆಶಯದಂತೆ ಭ್ರಷ್ಟಾಚಾರದಿಂದ ದೂರವಿರಿ ಎಂದು ಸಚಿವರಿಗೆ ಸಿದ್ದು ಸೂಚಿಸಿದರು.

ರಾಜ್ಯದ ಹಿತದೃಷ್ಠಿಯಿಂದ ಪ್ರತಿಯೊಂದು ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ಕಾನೂನು ಚೌಕಟ್ಟಿನಲ್ಲೇ ನಿರ್ವಹಿಸಬೇಕು. ಕಾನೂನು ಉಲ್ಲಂಘಿನೆಯಂತಹ ಕೆಲಸಗಳಿಗೆ ನೀವು ಮುಂದಾಗಬಾರದು. ಒಂದು ವೇಳೆ ಕಾನೂನು ಚೌಕಟ್ಟು ಮೀರಿದರೆ ಸರ್ಕಾರಕ್ಕೆ ಅಪವಾದ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ನಾವು ಉತ್ತಮ ಆಡಳಿತ ನೀಡುತ್ತೇವೆಂದು ಹೈಕಮಾಂಡ್ ತುಂಬಾ ವಿಶ್ವಾಸವಿಟ್ಟುಕೊಂಡಿದೆ. ಹೈಕಮಾಂಡ್ ನಮ್ಮ ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಹೈಕಮಾಂಡ್ ವಿಶ್ವಾಸದ ಜೊತೆಗೆ, ರಾಜ್ಯದ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಸಚಿವರೆಲ್ಲರು ಕಾನೂನು ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಸಿದ್ದು ನೂತನ ಸಚಿವರಿಗೆ ಸಲಹೆ ನೀಡಿದರು.

ಈಗ ಬೇಸಿಗೆಯಾದ್ದರಿಂದ ರಾಜ್ಯದಲ್ಲಿ ಈಗಾಗಲೇ ಜಲಕ್ಷಾಮ ಎದುರಾಗಿದೆ. ನಾಡಿನ ಜನತೆಗೆ ಕುಡಿಯುವ ನೀರು ಒದಗಿಸುವುದರ ಕಡೆ ನೀವು ಮೊದಲು ಗಮನ ಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾದ ಬಳಿಕ ಸ್ಥಳೀಯಾ ಸಮಸ್ಯೆಗಳ ಜೊತೆಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ಎಂದು ಸೂಚಿಸಿದರು.

ಪ್ರತಿಯೊಬ್ಬ ಸಚಿವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವುದರ ಜೊತೆಗೆ, ವಿಧಾನಸೌಧಕ್ಕೂ ಬಂದು ಸರಿಯಾಗಿ ಕಾರ್ಯನಿರ್ವಹಿಸಬೇಕು. ದೂರದ ಊರುಗಳಿಂದ ಬೆಂಗಳೂರಿಗೆ ಬರುವ ಜನರ ಸಮಸ್ಯೆ ಪರಿಹರಿಸಲು ಯತ್ನಿಸಿ ಎಂದು ಸಿಎಂ ತನ್ನ ಸಚಿವರಿಗೆ ಸಲಹೆ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement