ಸಿದ್ದು ಸಂಪುಟದ 28 ಸಚಿವರಿಂದ ಪ್ರಮಾಣ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟ ಇಂದು ರಚನೆಯಾಗಿದ್ದು, ಮೊದಲ ಹಂತದಲ್ಲಿ 28 ಶಾಸಕರು ..
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟ ಇಂದು ರಚನೆಯಾಗಿದ್ದು, ಮೊದಲ ಹಂತದಲ್ಲಿ 28 ಶಾಸಕರು ನೂತನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿಮನೆಯಲ್ಲಿ ಇಂದು ಬೆಳಗ್ಗೆ 10.30ಕ್ಕೆ ನಡೆದ ಸಮಾರಂಭದಲ್ಲಿ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಗದಗ ಶಾಸಕ ಎಚ್.ಕೆ.ಪಾಟೀಲ್, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಬಟ್ವಾಳ ಶಾಸಕ ರಮಾನಾಥ ರೈ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ನಂಜನಗೂಡು ಶಾಸಕ ವಿ.ಶ್ರೀನಿವಾಸ ಪ್ರಸಾದ್. ಟಿ.ನರಸಿಪುರ ಶಾಸಕ ಎಚ್.ಸಿ ಮಹದೇವಪ್ಪ, ಬೆಂಗಳೂರಿನ ಬಿ.ಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ, ಹೊಳಲ್ಕೆರೆ ಶಾಸಕ ಆಂಜನೇಯ, ಮಂಗಳೂರು ಶಾಸಕ ಯು.ಟಿ ಖಾದರ್, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಚಿಕ್ಕೋಡಿ-ಸದಲಗ ಶಾಸಕ ಪ್ರಕಾಶ್ ಹುಕ್ಕೇರಿ, ಗುಲ್ಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ, ಬೆಂಗಳೂರಿನ ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡ, ಬೆಂಗಳೂರಿನ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್, ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ, ತೇರದಾಳ ಶಾಸಕಿ ಉಮಾಶ್ರೀ, ಕಲಘಟಗಿ ಶಾಸಕ ಸಂತೋಷ್ ಲಾಡ್, ಮಂಡ್ಯ ಶಾಸಕ ಅಂಬರೀಷ್, ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್, ಕಾಪು ಶಾಸಕ ವಿನಯ್ ಕುಮಾರ್ ಸೊರಕೆ, ಸೇಡಂ ಶಾಸಕ ಶರಣ್ ಪ್ರಕಾಶ್ ಪಾಟೀಲ್, ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್, ಗುರಮಿಠ್ಕಲ್ ಶಾಸಕ ಬಾಬುರಾವ್ ಚಿಂಚನಸೂರು, ಬೆಂಗಳೂರಿನ ಸರ್ವಜ್ಞ ನಗರ ಶಾಸಕ ಕೆ.ಜೆ.ಜಾರ್ಜ್ ಹಾಗೂ ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯಕ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಎಲ್ಲ ಶಾಸಕರಿಗೂ ರಾಜ್ಯಪಾಲ ಎಚ್.ಆರ್.ಭಾರದ್ಜಾಜ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಸಚಿವ ಸ್ಥಾನ ವಂಚಿತರು ಸಮಾರಂಭಕ್ಕೆ ಗೈರು
ಸಚಿಸ ಸ್ಥಾನದ ಆಕಾಂಕ್ಷಿಯಾಗಿದ್ದು, ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡ ಕಾಂಗ್ರೆಸ್‌ನ ಕೆಲವು ಶಾಸಕರು ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಆಗಿದ್ದಾರೆ. ಡಿ.ಕೆ.ಶಿವಕುಮಾರ್, ಕಾಗೋಡು ತಿಮ್ಮಪ್ಪ ರಮೇಶ್ ಕುಮಾರ್ ಪರಿಷತ್ ಸದಸ್ಯೆ ಮೋಟಮ್ಮ ಹಾಗೂ ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರು ಸಮಾರಂಭಕ್ಕೆ ಗೈರು ಆಗಿದ್ದಾರೆ.
ಸಿದ್ದು ಸಂಪುಟದಲ್ಲಿ 10 ಜಿಲ್ಲೆಗಳಿಗಿಲ್ಲ ಪ್ರಾತಿನಿಧ್ಯ
ಜಿಲ್ಲಾವಾರು ಪ್ರಾತಿನಿಧ್ಯದ ಮೇಲೆ ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಸುಮಾರು 10 ಜಿಲ್ಲೆಗಳಿಗೆ ಸಿದ್ದು ಸಂಪುಟದಲ್ಲಿ ಯಾವುದೇ ಸಚಿವ ಸ್ಥಾನ ಸಿಕ್ಕಿಲ್ಲ.
ಬೆಂಗಳೂರು ಗ್ರಾಮಾಂತರ, ಹಾಸನ, ಬೀದರ್, ಕೊಡಗು, ಹಾವೇರಿ, ಚಿಕ್ಕಮಗಳೂರು,ರಾಯಚೂರು, ಕೋಲಾರ್, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಿಗೆ ಮೊದಲನೇ ಹಂತದ ಸಂಪುಟ ರಚನೆಯಲ್ಲಿ ಯಾವುದೇ ಸಚಿವ ಸ್ಥಾನ ನೀಡಲಾಗಿಲ್ಲ. ಇನ್ನು ಎರಡನೇ ಹಂತದಲ್ಲಾದರೂ ಈ ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆಯಲಿದೆಯೇ ಎಂಬುದು ಕಾದು ನೋಡಬೇಕು.