ಭಾರತಕ್ಕೆ ಆಗಮಿಸಿದ ಚೀನಾ ಪ್ರಧಾನಿ
ಗಡಿ ಸಮಸ್ಯೆ ಸೇರಿದಂತೆ, ದ್ವಿಪಕ್ಷಿಯ ವಿಚಾರಗಳ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಜತೆ ಮಾತುಕತೆ ನಡೆಸುವ ಸಲುವಾಗಿ ಚೀನಾ ಪ್ರಧಾನಿ...
ನವದೆಹಲಿ: ಗಡಿ ಸಮಸ್ಯೆ ಸೇರಿದಂತೆ, ದ್ವಿಪಕ್ಷಿಯ ವಿಚಾರಗಳ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಜತೆ ಮಾತುಕತೆ ನಡೆಸುವ ಸಲುವಾಗಿ ಚೀನಾ ಪ್ರಧಾನಿ ಲೀ ಕೆಗಿಯಾಂಗ್ ಅವರು ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ.
ಭಾರತೀಯ ವಾಯುಪಡೆಯ ಪಲಾಂ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಕೆಗಿಯಾಂಗ್‌ರನ್ನು ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಇ. ಅಹಮದ್ ಬರಮಾಡಿಕೊಂಡರು. ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿರುವ ಕೆಗಿಯಾಂಗ್ ಅವರು ಇಂದು ಸಂಜೆ ವೇಳೆಗೆ ಪ್ರಧಾನಿಯವರನ್ನು ಭೇಟಿ ಮಾಡಲಿದ್ದು, ಪ್ರಧಾನಿ ಸಿಂಗ್ ಅವರೊಂದಿಗೆ ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ.
ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕೆಗಿಯಾಂಗ್, ಮಧ್ಯಾಹ್ನದ ನಂತರ ಪ್ರಧಾನಿ ಸಿಂಗ್ ಜೊತೆ ಮಾತುಕತೆ ನಡೆಸಲ್ಲಿದ್ದಾರೆ. ಈ ಸಂದರ್ಭದಲ್ಲಿ ಗಡಿ ರಕ್ಷಣಾ ಸಹಕಾರ ಒಪ್ಪಂದವೂ ಚರ್ಚೆಗೆ ಬರಲಿದ್ದು, ಈ ಒಡಂಬಡಿಕೆಯನ್ನು ಚೀನಾ ಪ್ರಸ್ತಾಪಿಸಲಿದೆ. ಭಾರತ ಕೆಲ ಸಲಹೆಗಳನ್ನು ಸೇರಿಸಿ ಕರಡು ಸಿದ್ಧಪಡಿಸಿದ್ದು, ಈ ಕರಡಿನ ಮೇಲೆ ಮಾತುಕತೆ ನಡೆದು ಉಭಯ ದೇಶಗಳು ಒಂದು ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ.
ವಾಸ್ತವ ಗಡಿ ರೇಖೆ ಉಲ್ಲಂಘಿಸಿ ಚೀನಾ ಸೇನೆ ಸುಮಾರು 19 ಕಿ.ಮೀಟರ್ ಭಾರತದ ನೆಲದೊಳಗೆ ನುಸುಳಿದ್ದ ಸಮಸ್ಯೆ ಬಗೆಹರಿದ 20 ದಿನಗಳ ನಂತರ ಮೊದಲ ಬಾರಿಗೆ ಚೀನಾ ಪ್ರಧಾನಿ ಭಾರತಕ್ಕೆ ಆಗಮಿಸಿದ್ದಾರೆ.