ಅಕ್ರಮ ಆಸ್ತಿ: ಆಂಧ್ರ ಸಚಿವೆ ಸಬಿತಾ ರೆಡ್ಡಿ, ಸಚಿವ ಧರ್ಮಣ್ಣ ರಾಜಿನಾಮೆ
ಅಕ್ರಂ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಆಂಧ್ರಪ್ರದೇಶ ಗೃಹ ಸಚಿವೆ ಸಬಿತಾ ರೆಡ್ಡಿ ..
ಹೈದರಾಬಾದ್: ಅಕ್ರಂ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಆಂಧ್ರಪ್ರದೇಶ ಗೃಹ ಸಚಿವೆ ಸಬಿತಾ ರೆಡ್ಡಿ ಹಾಗೂ ಸಾರಿಗೆ ಮತ್ತು ವಸತಿ ಸಚಿವ ಧರ್ಮಣ್ಣ ಪ್ರಸಾದ್ ರಾವ್ ಅವರು ಭಾನುವಾರ ತಡ ರಾತ್ರಿ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ಕಡಪ ಸಂಸದ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಬಿತಾ ರೆಡ್ಡಿ ಹಾಗೂ ಧರ್ಮಣ್ಣ ಅವರು ನಿನ್ನೆ ರಾತ್ರಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಈ ಇಬ್ಬರು ಕಳಂಕಿತ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಪತ್ರ ನೀಡಿ, ಖಾಸಗಿ ವಾಹನದಲ್ಲಿ ತೆರಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಸಚಿವರ ರಾಜಿನಾಮೆ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಈ ನಡುವೆ ನಾಳೆ ಸಚಿವರ ರಾಜಿನಾಮೆ ಪತ್ರಗಳನ್ನು ಅಂಗೀಕಾರಕ್ಕಾಗಿ ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್ ಅವರಿಗೆ ರವಾನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.