ಕೊಂಡಯ್ಯ ಕುತಂತ್ರದಿಂದ ಸಚಿವ ಸ್ಥಾನ ತಪ್ಪಿತು: ಅನಿಲ್ ಲಾಡ್
ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಅವರ ಕುತಂತ್ರ ರಾಜಕಾರಣ..
ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಅವರ ಕುತಂತ್ರ ರಾಜಕಾರಣದಿಂದ ನನಗೆ ಸಚಿವ ಸ್ಥಾನ ತಪ್ಪಿತು ಎಂದು ಬಳ್ಳಾರಿ ಶಾಸಕ ಹಾಗೂ ಗಣಿ ಉದ್ಯಮಿ ಅನಿಲ್ ಲಾಡ್ ಅವರು ಸೋಮವಾರ ಆರೋಪಿಸಿದ್ದಾರೆ.
ಇಂದು ದೆಹಲಿಯಲ್ಲಿ ಮಾಧ್ಯಮಕ್ಕೆ ಮಾತನಾಡಿದ ಸಚಿವ ಸ್ಥಾನ ವಂಚಿತ ಅನಿಲ್ ಲಾಡ್, ನಾನು ಕಳಂಕಿತ ಅಲ್ಲ. ನನ್ನ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ ಮತ್ತು ಯಾವುದೇ ಭ್ರಷ್ಟಾಚಾರ ಪ್ರಕರಣ ಸಂಬಂಧ ಲೋಕಾಯುಕ್ತ ಅಥವಾ ಸಿಬಿಐ ನೋಟಿಸ್ ನೀಡಿಲ್ಲ. ಆದರೂ ನನ್ನನ್ನು ಕಳಂಕಿತ ಎನ್ನಲಾಗುತ್ತಿದೆ ಎಂದು ತಮ್ಮ ಅಳಲು ತೊಡಿಕೊಂಡರು. ಅಲ್ಲದೆ ಇದಕ್ಕೆಲ್ಲ ಬಳ್ಳಾರಿ ಕಾಂಗ್ರೆಸ್ ನಾಯಕ ಕೊಂಡಯ್ಯ ಅವರೇ ಕಾರಣ ಎಂದು ದೂರಿದರು.
ಇದೇ ವೇಳೆ, ಶಾಸಕರಾಗಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ಅನಿಲ್ ಲಾಡ್ ತಿಳಿಸಿದರು.