ಸಂಬಂಧ ವೃದ್ಧಿಗೆ ಭಾರತ-ಚೀನಾ ಯತ್ನ
ಭಾರತ-ಚೀನಾ ಗಡಿ ವಿವಾದ ಸೇರಿದಂತೆ ಹಲವು ಪ್ರಮುಖ ವಿಷಯಗಳ ಮೇಲಿನ ಚರ್ಚೆ ಫಲಪ್ರದವಾಗಿದೆ ಎಂದು..
ನವದೆಹಲಿ: ಭಾರತ-ಚೀನಾ ಗಡಿ ವಿವಾದ ಸೇರಿದಂತೆ ಹಲವು ಪ್ರಮುಖ ವಿಷಯಗಳ ಮೇಲಿನ ಚರ್ಚೆ ಫಲಪ್ರದವಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ದ್ವಿಪಕ್ಷಿಯ ಮಾತುಕತೆಯ ನಂತರ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಭಾರತ ಪ್ರವಾಸದಲ್ಲಿರುವ ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಹಾಗೂ ಪ್ರಧಾನಿ ಸಿಂಗ್ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಅವರ ಭಾರತ ಭೇಟಿಯನ್ನು ಶ್ಲಾಘಿಸಿದ ಪ್ರಧಾನಿ, ಲಿ ಅವರು ಪ್ರಧಾನಿಯಾಗಿ ಮೊದಲು ಭಾರತ ಪ್ರವಾಸ ಕೈಗೊಂಡಿದ್ದಕ್ಕೆ ಧನ್ಯವಾದ ಹೇಳಿದರು.
ಕಳೆದ 25 ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವ ಹಲವು ಭಿನ್ನಾಭಿಪ್ರಾಯಗಳಿದ್ದರೂ ಭಾರತ-ಚೀನಾ ನಡುವಿನ ಒಪ್ಪಂದಗಳು ಮಹತ್ವದ್ದಾಗಿವೆ. ಉಭಯ ದೇಶಗಳ ನಡುವೆ ಪರಸ್ಪರ ಸಂಬಂಧ ವೃದ್ಧಿಗೆ ನಡೆದ ಮಾತುಕತೆ ಫಲಪ್ರದವಾಗಿದೆ ಎಂದು ಸಿಂಗ್ ತಿಳಿಸಿದರು. ಬ್ರಹ್ಮಪುತ್ರ ಹಾಗೂ ಲಡಾಖ್ ಬಗ್ಗೆ ಚರ್ಚಿಸಿಲಾಗಿದೆ. ಬ್ರಹ್ಮಪುತ್ರದ ಬಗ್ಗೆ ಚೀನಾ ಮತ್ತಷ್ಟು ಮಾಹಿತಿ ನೀಡಬೇಕು ಎಂದು ಸಿಂಗ್ ಸೂಚಿಸಿದರು.
ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಮತ್ತು ಆರ್ಥಿಕ ಬೆಳವಣಿಗೆಗೆ ಪರಸ್ಪರ ಸಹಕಾರ ಅಗತ್ಯ. ಅಲ್ಲದೆ ಗಡಿ ವಿವಾದ ಪರಿಹಾರ ವೇಳೆ ಶಾಂತಿ ಪಾಲನೆ ಅತ್ಯಗತ್ಯ. ಇತ್ತೀಚೆಗಿನ ಗಡಿ ವಿವಾದಲ್ಲಿ ಈ ಬಗ್ಗೆ ನಾವು ಪಾಠ ಕಲಿತಿದ್ದೇವೆ ಎಂದು ಸಿಂಗ್ ಹೇಳಿದರು.
ಈ ವೇಳೆ ಮಾತನಾಡಿದ ಚೀನಾ ಪ್ರಧಾನಿ ಸಹ ಗಡಿ ವಿವಾದದ ಬಗ್ಗೆ ಪರಸ್ಪರ ಚರ್ಚೆ ನಡೆಸಿದ್ದು, ಗಡಿ ವಿವಾದವನ್ನು ತಳ್ಳಿ ಹಾಕುವಂತಿಲ್ಲ. ಆದರೆ ಉಭಯ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಅಗತ್ಯ ಎಂದರು. ಅಲ್ಲದೆ ಬ್ರಹ್ಮಪುತ್ರ ಬಗ್ಗೆ ಮತ್ತಷ್ಟು ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.
ಭಾರತ-ಚೀನಾ ದೇಶಗಳೆರಡೂ ಮಿತ್ರ ರಾಷ್ಟ್ರಗಳು, ಉಭಯ ದೇಶಗಳ ಒಪ್ಪಂದಕ್ಕೆ ಧಕ್ಕೆಯಾಗಲು ಬಿಡಲ್ಲ. ಈ ಎರಡೂ ರಾಷ್ಟ್ರಗಳ ಅಭಿವೃದ್ಧಿಯಾಗದೇ ಏಷ್ಯಾ ಹಾಗೂ ವಿಶ್ವದ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಉಭಯ ರಾಷ್ಟ್ರಗಳ ನಡುವೆ ಎಕನಾಮಿಕ್ ಕಾರಿಡಾರ್ ರಚಮೆ ಬಗ್ಗೆ ಅಧ್ಯಯನ ಮಾಡಲಾಗುವುದು ಎಂದು ಲಿ ತಿಳಿಸಿದರು.