ಅತ್ಯಾಚಾರಕ್ಕೊಳಗಾದ ಅನಾಥ ಹೆಣ್ಣುಮಕ್ಕಳಿಗೆ 3 ಲಕ್ಷ ಪರಿಹಾರ ಧನ
ಜೈಪುರ್: ಅತ್ಯಾಚಾರಕ್ಕೊಳಗಾದ ಅನಾಥ ವಿದ್ಯಾರ್ಥಿನಿಯರಿಗೆ ರಾಜಸ್ಥಾನ ಸರ್ಕಾರ ತಲಾ 3 ಲಕ್ಷ ಪರಿಹಾರ ಧನ ಘೋಷಿಸಿದೆ.
ಸರ್ಕಾರೇತರ ಸಂಸ್ಥೆ ನಡೆಸುತ್ತಿದ್ದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಅನಾಥ ಹೆಣ್ಣುಮಕ್ಕಳ ಮೇಲೆ ಸಂಸ್ಥೆಯ ಸಿಬ್ಬಂದಿ ಅತ್ಯಾಚಾರವೆಸಗಿ ದೈಹಿಕ ಹಿಂಸೆ ನೀಡಿದ್ದರು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯರಿಗೆ 3 ಲಕ್ಷ ಪರಿಹಾರ ಧನ ಘೋಷಿಸಿದೆ.
ರಾಜ್ಯ ಮುಖ್ಯಕಾರ್ಯದರ್ಶಿ ಸಿ.ಕೆ. ಮಾತೀವ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ 15 ದಿನದೊಳಗಾಗಿ ಚಾರ್ಜ್ಶೀಟ್ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಲಾಗಿದೆ.
ಜೈಪುರದ ಕನೋಟ ಪ್ರದೇಶದಲ್ಲಿರುವ ಸರ್ಕಾರೇತರ ಶಾಲೆಯಲ್ಲಿ ಈ ಘಟೆನ ಸಂಭವಿಸಿದ್ದು, ಶಾಲೆಯ ಸಿಬ್ಬಂದಿಗಳೇ ಇನ್ನು 5 ಕಿವುಡು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಸಿ ದೈಹಿಕ ಹಿಂಸೆ ನೀಡಿರುವುದು ವರದಿಯಾಗಿದ್ದು ಇದರ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಶಾಲೆಯ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣವನ್ನು ಮುಖ್ಯಮಂತ್ರಿ ಅಶೋಕ್ ಗೆಲೋಟ್ ಖಂಡಿಸಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಮಾತೀವ್ ಹೇಳಿದ್ದಾರೆ.