ಆರುಷಿ ಕೊಲೆ ಪ್ರಕರಣ: ತಲ್ವಾರ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಅಲಹಾಬಾದ್: ಆರುಷಿ ಕೊಲೆ ಪ್ರಕರಣದಲ್ಲಿ ಮತ್ತೆ 14 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಬೇಕು ಎಂದು ಕೋರಿ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಆರುಷಿ ಮತ್ತು ಹೇಮರಾಜ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ದಂಪತಿಗಳು ಮತ್ತೆ 14 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ರಾಜೇಶ್ ದಯಾಲ್ ಖರೇ ಅವರು ಅರ್ಜಿಯನ್ನು ತಿರಸ್ಕರಿಸಿದ್ದು, ನ್ಯಾಯಾಲಯಕ್ಕೆ ಇನ್ನುಳಿದ ಸಾಕ್ಷಿಗಳು ವಿಚಾರಣೆಗೊಳಪಡಿಸಿ ಎಂದು ಒತ್ತಡ ಹೇರುವ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಸಾಕಷ್ಟು ಸಾಕ್ಷಿಗಳನ್ನು ಪ್ರಕರಣದ ವಿಚಾರಣೆಯಲ್ಲಿ ಪರಿಗಣಿಸಲಾಗಿದೆ ಎಂದು ನ್ಯಾಯಾಪೀಠ ಹೇಳಿದೆ. ಸಿಬಿಐ ಪರ ವಕೀಲರು ತಲ್ವಾರ್ ಸಲ್ಲಿಸಿದ್ದ ಅರ್ಜಿಗೆ ವಿರೋಧ ವ್ಯಕ್ತ ಪಡಿಸಿದ್ದು, ತಲ್ವಾರ್ ಅವರು ಪ್ರಕರಣವನ್ನು ನ್ಯಾಯಾಲಯ ಮುಂದೂಡಲಿ ಎಂಬ ಉದ್ದೇಶದಿಂದ ಈ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ನ್ಯಾಯಾಲಯ ಇದನ್ನು ಪರಿಗಣಿಸಬಾರದು ಎಂದು ವಾದ ಮಂಡಿಸಿದ್ದರು.
14 ವರ್ಷದ ಬಾಲಕಿ ಆರುಷಿ 2008ರಲ್ಲಿ ನೋಯ್ಡಾದಲ್ಲಿರುವ ತನ್ನ ಮನೆಯಲ್ಲಿನ ಮಲಗುವ ಕೊಠಡಿಯಲ್ಲಿ ಹತ್ಯೆಯಾಗಿದ್ದಳು. ಒಂದು ದಿನದ ನಂತರ ಮನೆ ಕೆಲಸಗಾರ ಹೇಮರಾಜ್ ಶವ ಕೂಡ ಮನೆಯ ಮಹಡಿ ಮೇಲೆ ಪತ್ತೆಯಾಗಿತ್ತು.