ಐಪಿಎಲ್ ಪಂದ್ಯಾವಳಿ ತಡೆಗೆ ಸುಪ್ರೀಂ ನಕಾರ
ಇಂಡಿಯನ್ ಪ್ರೀಮೀಯರ್ ಲೀಗ್(ಐಪಿಎಲ್) ಪಂದ್ಯಾವಳಿಗೆ ತಡೆಯಾಜ್ಞೆ ಹೊರಡಿಸಲು...
ನವದೆಹಲಿ: ಇಂಡಿಯನ್ ಪ್ರೀಮೀಯರ್ ಲೀಗ್(ಐಪಿಎಲ್) ಪಂದ್ಯಾವಳಿಗೆ ತಡೆಯಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದಿರುವುದರಿಂದ ಉಳಿದಿರುವಂತಹ ಪಂದ್ಯಾವಳಿಗಳಿಗೆ ತಡೆಯಾಜ್ಞೆ ಹೇರಬೇಕೆಂದು ಕೋರಿ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿತ್ತು.
ಐಪಿಎಲ್ ಪಂದ್ಯಾವಳಿಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದಿರುವುದರಿಂದ ಇನ್ನುಳಿದಂತ ಪಂದ್ಯಗಳಿಗೆ ತಡೆಯಾಜ್ಞೆ ಹೇರಬೇಕು ಹಾಗೂ ಹಗರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಲಕ್ನೋ ನಿವಾಸಿ ಸುದರ್ಶ್ ಅವಸ್ತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಪೀಠ ಕೆಲ ಆಟಗಾರರ ತಪ್ಪುಗಳಿಂದಾಗಿ ಇಡೀ ಪಂದ್ಯಾವಳಿಗೆ ನಿರ್ಬಂಧ ಹೇರುವುದು ಸರಿಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಬಿಸಿಸಿಐಗೆ ನಿರ್ದೇಶಿಸಿದೆ.
ಏಕಸದಸ್ಯ ತನಿಖಾ ಸಮಿತಿ ರಚಿಸಿ ಹಗರಣದ ಬಗ್ಗೆ ಪೂರ್ಣ ತನಿಖೆ ನಡೆಸಿ 15 ದಿನದೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಬಿಸಿಸಿಐಗೆ ಆದೇಶಿಸಿದೆ.
ಸ್ಪಾಟ್ ಫಿಕ್ಸಿಂಗ್ ಮಾಡಿದಂತ ಕ್ರಿಕೆಟ್ ಆಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಹಗರಣಗಳಿಗೆ ಕಡಿವಾಣ ಹಾಕಬೇಕು ಎಂದು ಸುಪ್ರೀಂ ಬಿಸಿಸಿಐಗೆ ಸೂಚಿಸಿದೆ.