ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಪಿಎಲ್ ಸ್ಪಾಟ್ ಫಿಕ್ಸಿಂಗ್: ವಿಂದೂ ದಾರಾ ಸಿಂಗ್ ಬಂಧನ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಬುಕ್ಕಿ ರಮೇಶ್ ವ್ಯಾಸ್ ಬಂಧನದ ಬೆನ್ನಲ್ಲೇ, ಬಾಲಿವುಡ್ ಹಿರಿಯ ನಟ..

Lingaraj Badiger
Updated On : 21 May 2013, 7:14 am

ಮುಂಬೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಬುಕ್ಕಿ ರಮೇಶ್ ವ್ಯಾಸ್ ಬಂಧನದ ಬೆನ್ನಲ್ಲೇ, ಬಾಲಿವುಡ್ ಹಿರಿಯ ನಟ ದಾರಾ ಸಿಂಗ್ ಅವರ ಪುತ್ರ ವಿಂದೂ ಅವರನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ಮೂಲಕ ಬಾಲಿವುಡ್ ಹಾಗೂ ಸ್ಪಾಟ್ ಫಿಕ್ಸಿಂಗ್ ನಂಟು ಬಯಲಾಗಿದೆ.

ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಮುಂಬೈ  ಕ್ರೈಂ ಬ್ರಾಂಚ್ ಪೊಲೀಸರು ಇಂದು ವಿಂದೂ ದಾರಾ ಸಿಂಗ್ ಅವರನ್ನು ಬಂಧಿಸಿದ್ದಾರೆ. ವಿಂದೂ ದಾರಾ ಸಿಂಗ್ ಅವರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಮುಂಬೈನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರ್ ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ವಿಂದೂ ಅವರನ್ನು ಮೇ 24ರವರೆಗೆ ಪೊಲೀಸ್ ಕಸ್ಟಡಿಗೆ ಆದೇಶಿಸಿದೆ. ಬುಕ್ಕಿಗಳೊಂದಿಗೆ ಹೇಗೆ ಸಂಪರ್ಕ ಬೆಳೆಯಿತು ಎಂಬುದರ ಬಗ್ಗೆ ಪೊಲೀಸರು ವಿಂದೂ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಈ ಮಧ್ಯೆ ಪೊಲೀಸ್ ವಶದಲ್ಲಿರುವ ವಿಂದೂ ಪೊಲೀಸರೆದುರು ತಪ್ಪೊಪ್ಪಿಕೊಂಡ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದ್ದು, ವಿಂದೂ ಬುಕ್ಕಿಗಳೊಂದಿಗಿನ ನಂಟು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಮುಖ ಬುಕ್ಕಿಗಳೊಂದಿಗೆ ನಂಟು ಹೊಂದಿದ್ದ ರಮೇಶ್ ವ್ಯಾಸ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಿಂದೂ ದಾರಾ ಸಿಂಗ್ ಅವರನ್ನು ಬಂಧಿಸಿದ್ದಾರೆ.

ಬಿಗ್ ಬಾಸ್ ಸೀಸನ್-3ರ ವಿಜೇತರಾಗಿದ್ದ ವಿಂದೂ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಹಾಗೂ ಹಿಂದಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಅವರು ಹಲವು ಕ್ರಿಕೆಟ್ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎನ್ನಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಅವರ ಪತ್ನಿಯೊಂದಿಗೆ ಮತ್ತು ಯುವರಾಜ್ ಸಿಂಗ್ ಸೇರಿದಂತೆ ಹಲವು ಆಟಗಾರರೊಂದಿಗೆ ವಿಂದೂ ಉತ್ತಮ ಸ್ನೇಹ ಹೊಂದಿದ್ದರು ಎನ್ನಲಾಗಿದೆ.

ಇದೇ ಪ್ರಕರಣ ಸಂಬಂಧ ಇಂದು ಬೆಳಗ್ಗೆಯಷ್ಟೇ ದೆಹಲಿಯಲ್ಲಿ ರಣಜಿ ಮಾಜಿ ಆಟಗಾರ ಬಾಬುರಾವ್ ಯಾದವ್ ಹಾಗೂ ಚೆನ್ನೈನಲ್ಲಿ ಪ್ರಶಾಂತ್ ಎಂಬ ಬುಕ್ಕಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆಟಗಾರ ಅಜಿತ್ ಚಾಂಡಿಯೊಂದಿಗಿನ ಸಂಬಂಧದ ಬಗ್ಗೆ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯಾದವ್ ಬಂಧಿತ ಬುಕ್ಕಿ ಸುನೀಲ್ ಭಾಟಿಯಾರನ್ನು ಚಂಡಿಲಾಗೆ ಪರಿಚಯಿಸಿದ್ದ ಎನ್ನಲಾಗಿದೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಮೂವರು ಐಪಿಎಲ್ ಆಟಗಾರರು, ನಾಲ್ವರು ಮಾಜಿ ಆಟಗಾರರು ಹಾಗೂ 11 ಬುಕ್ಕಿಗಳು ಸೇರಿದಂತೆ ಈವರೆಗೆ ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement