ಪ್ರಧಾನಿ ಅಭ್ಯರ್ಥಿಯ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ
2014ರ ಸಾರ್ವಜನಿಕ ಚುನಾವಣಾ ತಯಾರಿಯ ಅಂಗವಾಗಿ ಮಂಗಳವಾರ ಸಭೆ ಸೇರಿದ್ದ ಬಿಜೆಪಿ ..
ನವದೆಹಲಿ: 2014ರ ಸಾರ್ವಜನಿಕ ಚುನಾವಣಾ ತಯಾರಿಯ ಅಂಗವಾಗಿ ಮಂಗಳವಾರ ಸಭೆ ಸೇರಿದ್ದ ಬಿಜೆಪಿ ಸಂಸದೀಯ ಮಂಡಳಿ, ಸೂಕ್ತ ಸಮಯದಲ್ಲಿ ಪ್ರಧಾನಿ ಅಭ್ಯರ್ಥಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಆ ಬಗ್ಗೆ ಮಾಧ್ಯಮದವರಲ್ಲಿ ಮಾತನಾಡಿದ ಬಿಜೆಪಿ ಮುಖ್ಯಸ್ಥ ರಾಜ್ನಾಥ್ ಸಿಂಗ್, ನಾವು ಚುನಾವಣೆಗೆ ಸಿದ್ಧರಾಗಿದ್ದೇವೆ. 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದನ್ನು ಸೂಕ್ತ ಸಮಯದಲ್ಲಿ ನಾವು ನಿರ್ಧರಿಸಲಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಮರುಕಳಿಸದಿರಲು ದೇಶದ ಯುವ ಜನಾಂಗದೊಂದಿಗೆ ಬಿಜೆಪಿ ಸಂಪರ್ಕ ಬೆಳೆಸಿಕೊಳ್ಳಬೇಕಾಗಿದೆ. ಯುವ ಜನಾಂಗದೊಂದಿಗೆ ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣಗಳು ಸೂಕ್ತ ಎಂಬುದನ್ನು ರಾಜ್ನಾಥ್ ಸಿಂಗ್ ಒತ್ತಿ ಹೇಳಿದ್ದಾರೆ.
ಪ್ರಸ್ತುತ ಸಭೆಯಲ್ಲಿ ಸಂಸದೀಯ ಮಂಡಳಿಯ ಸದಸ್ಯರು ಸೇರಿದಂತೆ ನೂತನವಾಗಿ ಮಂಡಳಿಗೆ ಆಯ್ಕೆಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡಾ ಹಾಜರಾಗಿದ್ದರು.