ಬಾಹ್ಯಶಕ್ತಿಗಳೆ ಚುನಾವಣೆ ಸೋಲಿಗೆ ಕಾರಣ: ಜರ್ದಾರಿ
ಲಾಹೋರ್: ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನದ ಪೀಪಲ್ಸ್ ಪಾರ್ಟಿ(ಪಿಪಿಪಿ) ಸೋಲಿಗೆ ಆಂತರಿಕ ಮತ್ತು ಬಾಹ್ಯಶಕ್ತಿಗಳೆ ಕಾರಣ ಎಂದು ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮಂಗಳವಾರ ಹೇಳಿದ್ದಾರೆ.
ಇಂದು ಪಂಜಾಬ್ ಪ್ರಾಂತ್ಯದಲ್ಲಿರುವ ಖಾಸಗಿ ಮನೆಯಲ್ಲಿ ಪಿಪಿಪಿ ಮುಖಂಡರೊಂದಿಗೆ ಮಾತನಾಡಿದ ಜರ್ದಾರಿ ಬಾಹ್ಯ ಶಕ್ತಿಗಳು ಪಕ್ಷದ ಸೋಲಿಗೆ ಕಾರಣ. ಬಾಹ್ಯ ಶಕ್ತಿಗಳಿಗೆ ಪಿಪಿಪಿ ಮತ್ತೆ ಅಧಿಕಾರಕ್ಕೆ ಬರುವುದು ಇಷ್ಟವಿರಲಿಲ್ಲ ಎಂದು ಆಪಾದಿಸಿದ್ದಾರೆ.
ಅನ್ಯ ದೇಶಗಳೊಂದಿಗೆ ಪಿಪಿಪಿ ಸರ್ಕಾರ ಮಾಡಿದ ಒಪ್ಪಂದಗಳು ಬಾಹ್ಯ ಶಕ್ತಿಗಳಿಗೆ ಇಷ್ಟವಿರಲಿಲ್ಲ. ಪಿಪಿಪಿ ಅಧಿಕಾರವನ್ನು ಕದಿಯಲಾಗಿದೆ. ಆದರೆ ಪಿಪಿಪಿ ಮಾತ್ರ ಹೋರಾಟವನ್ನು ನಿಲ್ಲಿಸುವುದಿಲ್ಲ. ಕೇಂದ್ರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಉತ್ತಮ ಪಾತ್ರ ನಿರ್ವಹಿಸಲಿದೆ ಎಂದು ಜರ್ದಾರಿ ಹೇಳಿದ್ದಾರೆ.